ಮುಳಬಾಗಲು: ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದ ತಾಪಂ ಕಚೇರಿ ಎದುರು ಧರಣಿ ನಡೆಸಿದರು.
ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಾಲಾ ಕಾಲೇಜುಗಳಿಗೆ ಅಗತ್ಯವಾದ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಿಸಲು, ಶಿಕ್ಷಣ ಹಕ್ಕು ಕಾಯಿದೆ 2009 (ಆರ್‌ಟಿಇ) ಸಮರ್ಪಕವಾಗಿ ಜಾರಿ ತರಲು. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಶೇ.10 ಮತ್ತು ರಾಜ್ಯ ಸರ್ಕಾರ ಶೇ.30 ರಷ್ಟು ಮೀಸಲಿಡಲು. ಅರ್ಜಿ ಹಾಕಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ನಲ್ಲಿ ಪ್ರವೇಶ ಒದಗಿಸಬೇಕು, ವಿದ್ಯುತ್ ಸೌಲಭ್ಯ. ಗ್ರಂಥಾಲಯ ಸೌಕರ್ಯ, ಆಹಾರ ಭತ್ಯೆ, ದಿನಪತ್ರಿಕೆ ಪ್ರತಿ ಕಾಲೇಜಿನಲ್ಲಿ ಕ್ಯಾಂಟಿನ್ ವ್ಯವಸ್ಥೆ ಒದಗಿಸಲು ವಿದ್ಯಾರ್ಥಿಗಳು ಒತ್ತಾಯಿಸಿದರು. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ವೆಂಕಟಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೋಲಾರ ಎಸ್‌ಎಫ್‌ಐ ಅಧ್ಯಕ್ಷ ಕೆ.ವಾಸುದೇವರೆಡ್ಡಿ, ತಾಲೂಕು ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷರಾದ ಕುಮಾರ್, ಜಬೀವುಲ್ಲಾ ಸೇರಿದಂತೆ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.