ಕೋಲಾರ: ತಿರುಮಲ ತಿರುಪತಿಯಲ್ಲಿ ಕರ್ನಾಟಕ ರಾಜ್ಯದ ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸಲು ರೂಪಿಸಿರುವ ಯೋಜನೆಗೆ ಉಂಟಾಗಿರುವ ಅಡಚಣೆ ನಿವಾರಿಸಿ ವಸತಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬುಧವಾರ ಬೆಂಗಳೂರಿನಿಂದ ತಿರುಪತಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾರ್ಗ ಮಧ್ಯೆ ಪ್ರಸಿದ್ಧ ಮುಳಬಾಗಲು ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದರು.
ತಿರುಮಲ ತಿರುಪತಿಯಲ್ಲಿ ಕರ್ನಾಟಕ ರಾಜ್ಯದ ಪ್ರವಾಸಿಗರಿಗೆ ವಸತಿ ಸೌಕರ್ಯಕ್ಕಾಗಿ ಕೆಲವು ವರ್ಷಗಳ ಹಿಂದೆ ಸುಮಾರು 800 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಕರ್ನಾಟಕ ಛತ್ರದ ಬಳಿ ಈ ಯೋಜನೆ ಅನುಷ್ಠಾನಕ್ಕೆ ತರಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಕಾಮಗಾರಿ ಆರಂಭಕ್ಕೆ ತಿರುಮಲ ತಿರುಪತಿ ದೇವಾಸ್ಥಾನದ ಆಡಳಿತ ಮಂಡಳಿಯವರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ವ್ಯಾಜ್ಯ ಇತ್ಯರ್ಥಕ್ಕೆ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಯತ್ನ ನಡೆದಿಲ್ಲವೆಂಬ ಆರೋಪ ಕೇಳಿ ಬಂದಿದೆ ಎಂದು ಸಚಿವರ ಗಮನಕ್ಕೆ ತಂದಾಗ, ಈ ವಿಚಾರ ನನ್ನ ಗಮನಕ್ಕೆ ಈಗ ತಾನೇ ಅಧಿಕಾರಿಗಳು ತಂದಿದ್ದಾರೆ. ತಿರುಪತಿಯಲ್ಲಿ ದೇವಸ್ಥಾನದ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಸೂಕ್ತ ಕ್ರಮ: ರಾಜ್ಯದಿಂದ ನೇಮಕವಾಗಿರುವ ವಕೀಲರು ಹೈದರಾಬಾದಿನ ಕೋರ್ಟ್‌ಗೆ ಹಾಜರಾಗಿ ತಮ್ಮ ವಾದ ಮಂಡನೆ ಮಾಡುವುದಕ್ಕೆ ಅವಕಾಶ ಸಿಗುತ್ತಿಲ್ಲ. ಕೋರ್ಟ್‌ನಿಂದ ಕಳೆದ ಮೂರು ವರ್ಷದಿಂದ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ಬಂದಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆಂದಾಗ, ಈ ಕುರಿತು ಟಿಟಿಡಿ ಆಡಳಿತ ಮಂಡಳಿ ಮತ್ತು ಅಲ್ಲಿನ ನಮ್ಮ ಅಧಿಕಾರಿಗಳ ಜತೆ ಚರ್ಚಿಸಿ ವಸತಿ ಯೋಜನೆ ಅನುಷ್ಠಾನಕ್ಕೆ ಇರುವ ಸಮಸ್ಯೆ ನಿವಾರಣೆ ಮಾಡಲು ಗಮನ ನೀಡುವೆ ಎಂದರು.
ತಮ್ಮ ಅಧಿಕಾರದ ಅವಧಿಯಲ್ಲೇ ವಸತಿ ಯೋಜನೆಗೆ ಇರುವ ಅಡಚಣೆ ನಿವಾರಣೆ ಮಾಡುವಿರಾ ಎಂದಾಗ, ಅದೇ ಪ್ರಯತ್ನಕ್ಕಾಗಿಯೇ ಸಂಬಂಧಪಟ್ಟ ಅಧಿಕಾರಗಳ ಜತೆ ಚರ್ಚಿಸಿ, ನಂತರ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.