ಕೋಲಾರ

ನನಸಾಗದ ಭೀಮಸೇನ್ ಸ್ಮಾರಕ

ಕೋಲಾರ: ಮಿಲೆ ಸುರ್ ಮೇರಾ ತುಮಾರಾ..., ಭಾಗ್ಯದ ಲಕ್ಷ್ಮೀ ಬಾರಮ್ಮ..., ತುಂಗಾ ತೀರದಿ... ಸೇರಿದಂತೆ ಸಾವಿರಾರು ಜನಪ್ರಿಯ ಹಾಡುಗಳು ದೇಶ-ವಿದೇಶದಲ್ಲಿ, ಪ್ರತಿಯೊಬ್ಬರ ಮನದಲ್ಲಿ ಸ್ಥಿರವಾಗಿ ಉಳಿದಿರುವುದಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಅಧಿಪತಿ ಎಂದೇ ಕರೆಯಬಹುದಾದ ಕನ್ನಡ ನಾಡಿನ ಹೆಮ್ಮೆಯ ಪುತ್ರ, ಭಾರತ ರತ್ನ ಡಾ. ಭೀಮಸೇನ್ ಗುರುರಾಜ ಜೋಷಿ ಅವರ ಕೊಡುಗೆ ಅಪಾರ.
ಗದಗ ಜಿಲ್ಲೆಯ ಬೆಟಗೇರಿ ಎಂಬ ಸಣ್ಣ ಗ್ರಾಮದಲ್ಲಿ ಸಾಮಾನ್ಯ ಬ್ರಾಹ್ಮಣರ ಕುಟುಂಬದಲ್ಲಿ 1922ರಲ್ಲಿ ಜನಿಸಿದ ಭೀಮಸೇನ್ ಜೋಷಿ ಚಿಕ್ಕ ವಯಸ್ಸಿನಲ್ಲೇ ಭಜನೆಗಳ ಮೇಲೆ ಆಸಕ್ತಿ ಮೂಡಿಸಿಕೊಂಡು ನಂತರದ ದಿನಗಳಲ್ಲಿ ತಮ್ಮ ಗುರಿ, ಛಲ, ಸಾಧನೆ ಮೂಲಕ ವಿಖ್ಯಾತರಾಗಿದ್ದಾರೆ.
ತಮ್ಮ 11ನೇ ವಯಸ್ಸಿನಲ್ಲೇ ಸಂಗೀತ ಕಲಿಯುವುದಕ್ಕಾಗಿ ಗುರುವಿನ ಗುಲಾಮನಾಗಬೇಕೆಂಬ ಉದ್ದೇಶದಿಂದ ಮನೆ ತೊರೆದು ಗುರುವಿಗಾಗಿ ಹುಡುಕಾಟ ಆರಂಭಿಸಿದರು. ಮಗ ಮನೆ ಬಿಟ್ಟು ಹೋಗುವುದು ತಂದೆಗೆ ಇಷ್ಟವಿರಲಿಲ್ಲ. ಆದರೂ ಸಂಗೀತ ಕಲಿಯಬೇಕೆಂಬ ಮಹದಾಸೆಯಿಂದ ಭೀಮಸೇನ್ ಜೋಷಿ ತಂದೆಗೆ ವಿರುದ್ಧವಾಗಿ ಮನೆ ಬಿಟ್ಟು ಸತತ 8 ವರ್ಷಗಳ ಕಾಲ ಮನೆಯಿಂದ ಹೊರ ಉಳಿದು ಹಿಂದಿ- ಮರಾಠಿ ಭಜನೆಗಳನ್ನು ಅಭ್ಯಾಸ ಮಾಡಿದರಲ್ಲದೆ, ಕನ್ನಡ ದಾಸರ ಕೀರ್ತನೆಗಳನ್ನು ಸಹ ಕಲಿತರು. ಈ ಮೂಲಕ ತಮ್ಮ 19ನೇ ವಯಸ್ಸಿನಲ್ಲಿ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡಿ ಸಂಗೀತ ಪ್ರಿಯರ ಗಮನ ಸೆಳೆದರು.
ಕಿರಾನಾ-ಗಿರಾನಾ ರಾಗಗಳ ಮೂಲಕ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಏಳು ದಶಕಗಳ ಕಾಲ ಕೃಷಿ ಮಾಡಿ ಭಾರತರತ್ನ ಪ್ರಶಸ್ತಿ ತಮ್ಮದಾಗಿಸಿಕೊಂಡ ಭೀಮಸೇನ್ ಜೋಷಿ ಅವರು ಕಳೆದ 2011ರ ಜನವರಿ 24 ರಂದು ವಿಧಿವಶರಾಗಿದ್ದರೂ ಸಂಗೀತ ಲೋಕದಲ್ಲಿನ ತಮ್ಮ ಸಾಧನೆ, ಪ್ರತಿಭೆ, ಸಿರಿಕಂಠದಿಂದ ಮೇರು ಪರ್ವತದಂತೆ ಉಳಿದಿದ್ದಾರೆ.
ರಾಷ್ಟ್ರೀಯ ಐಕ್ಯತೆ ಪ್ರತಿಪಾದಿಸುವ, ಪ್ರೇರೇಪಿಸುವ ಮಿಲೆ ಸುರ್ ಮೇರಾ ತುಮಾರಾ ಹಾಡಿನ ಮೂಲಕ ದಿವಂಗತ ಜೋಷಿ ಅವರು ಕರ್ನಾಟಕದ ಶ್ರೇಷ್ಠ ಸಂಗೀತ ಸಂತರಾಗಿ ಎಲ್ಲರ ಹೃದಯದಲ್ಲಿ ಅನಾವರಣಗೊಂಡಿದ್ದಾರೆ.
1972ರಲ್ಲಿ ಪದ್ಮಶ್ರೀ, 1976ರಲ್ಲಿ ಸಂಗೀತ ನಾಟಕ ಅಕಾಡೆಮಿ, 1986ರಲ್ಲಿ ಪದ್ಮಭೂಷಣ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಸಂಗೀತ ಲೋಕದ ದಿಗ್ಗಜ ಭೀಮಸೇನ್ ಅವರು ಈಗ ನಮ್ಮ ನಡುವೆ ಇಲ್ಲದಿದ್ದರೂ ಇವರ ಸ್ವರ, ರಾಗ, ಆಲಾಪನೆಗಳು ಎಂದೆಂದಿಗೂ ಚಿರವಾಗಿರುತ್ತವೆ.
ಮಾತು ತಪ್ಪಿದ ರಾಜ್ಯ ಸರ್ಕಾರ: ಆದರೆ, ರಾಜ್ಯ ಸರ್ಕಾರ ಈ ಧೀಮಂತ ಸಂಗೀತ ಶಕ್ತಿಯ ನೆನಪು ಉಳಿಸಲು, ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುವುದಕ್ಕೆ ತಾನೇ ನೀಡಿದ ಭರವಸೆಯನ್ನು ಈಡೇರಿಸಲು ಮೀನಮೇಷ ಎಣಿಸುತ್ತಿದೆ.
ಭೀಮಸೇನ್ ಜೋಷಿ ಅವರ ಸ್ಮರಣಾರ್ಥವಾಗಿ ಸ್ಮಾರಕ ಭವನ ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ ಎರಡು ವರ್ಷವಾದರೂ ಕೊಟ್ಟ ಮಾತು ಉಳಿಸಿಕೊಂಡಿಲ್ಲ.
ರಾಜಕೀಯ ಜಂಜಾಟದಲ್ಲಿರುವ ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಅಧಿಕಾರದ ಕೊನೆ ದಿನಗಳಲ್ಲಿಯಾದರೂ ಸಂಗೀತ ಪ್ರಿಯರಿಗೆ ಮತ್ತು ಸಂಗೀತ ಕಲಿಯುವ ಮಕ್ಕಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಅನುಷ್ಠಾನಕ್ಕೆ ತರುವ ಮೂಲಕ ಭೀಮಸೇನ್ ಗುರುರಾಜ ಜೋಷಿ ಅವರಿಗೆ ಗೌರವ ಸಲ್ಲಿಸುವುದಕ್ಕೆ ಗಮನ ನೀಡಲಿ ಎಂಬುದು ನಾಡಿನ ಸಂಗೀತ ಆರಾಧಕರ ಒತ್ತಾಸೆಯಾಗಿದೆ.
-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!