ಶ್ರೀನಿವಾಸಪುರ: ಅಕ್ರಮವಾಗಿ ಆಸ್ತಿ-ಪಾಸ್ತಿ ಮಾಡಿರುವ ಬಗ್ಗೆ ಮಾಜಿ ಜಿಪಂ ಅಧ್ಯಕ್ಷ ಹಾಗೂ ಆತನ ಹೆಂಡತಿ ಮೇಲೆ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ ಬೆಂಗಳೂರು ಲೋಕಾಯುಕ್ತರು ಬುಧವಾರ ಬೆಳಗಿನ ಜಾವ ದಿಢೀರ್ ದಾಳಿ ನಡೆಸಿ ದಾಖಲಾತಿಗಳನ್ನು ವಶ ಪಡಿಸಿಕೊಂಡಿರುವುದಾಗಿ ಲೋಕಾಯುಕ್ತ ಡಿವೈಎಸ್ಪಿ ಸ್ವಾಮಿಯವರು ತಿಳಿಸಿದ್ದಾರೆ.
ದಾಳಿ ನಡೆಸಿ ಮನೆಯಲ್ಲಿ ಜಪ್ತಿ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ವಕೀಲರಾದ ಮಾರುತಿರೆಡ್ಡಿಯವರು ಮಾಜಿ ಜಿಪಂ ಅಧ್ಯಕ್ಷ ಹಾಗೂ ಹಾಲಿ ಎಪಿಎಂಸಿ ಅಧ್ಯಕ್ಷ ಎಂ. ಶ್ರೀನಿವಾಸನ್ ಮತ್ತು ಆತನ ಹೆಂಡತಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ವೈದ್ಯಾಧಿಕಾರಿ ಎಸ್. ಚಂದ್ರಕಲಾ ವಿರುದ್ಧ ಹುದ್ದೆಗಿಂತ ಮೀರಿ ಹೆಚ್ಚು ಆಸ್ತಿ ಮಾಡಿದ್ದಾರೆ ಎಂದು ಬೆಂಗಳೂರು ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು.
ತನಿಖೆ ನಡೆಸಿ ಮೇಲೆ ಕಾನೂನು ಕ್ರಮ ಜರುಗಿಸಿ ಅಕ್ರಮ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೋರಿದ್ದರು. ಬೆಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಪುವಯ್ಯ, ನರಸಿಂಹಮೂರ್ತಿ, ಪುಟ್ಟಸ್ವಾಮಿ, ರವಿಶಂಕರ, ಅಂಜನ್ ಕುಮಾರ್ ಹಾಗೂ ಕೋಲಾರ ಡಿವೈಎಸ್ಪಿ ನಾಗರಾಜ್ ಮತ್ತು ಇನ್ಸ್‌ಪೆಕ್ಟರ್ ಲೋಕೇಶ್ ಮತ್ತಿತರರ ತಂಡ ಬುಧವಾರ ಬೆಳಗ್ಗೆ 5ಗಂಟೆಗೆ ಎಂ. ಶ್ರೀನಿವಾಸನ್ ಅವರ ಮನೆ ಮೇಲೆ ದಾಳಿ ನಡೆಸಿತು.