ಮುಳಬಾಗಲು: ದೇಶದಲ್ಲಿ ಪೊಲಿಯೋ ಸಂಪೂರ್ಣವಾಗಿ ನಿವಾರಿಸಲಾಗಿದೆ. ಇದಕ್ಕಾಗಿ ರೋಟರಿ ಇಂಟರ್ನ್ಯಾಷನಲ್ ಒಂದು ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಅದೇ ರೀತಿಯಲ್ಲಿ ದೇಶವನ್ನು ಬರುವ ಮೂರು ವರ್ಷದಲ್ಲಿ ಸಂಪೂರ್ಣ ಸಾಕ್ಷರತಾ ದೇಶವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಿ.ಕೆ. ವೆಂಕಟನಾರಾಯಣ್ ನುಡಿದರು.
ತಾಲೂಕು ಕಪ್ಪಲಮೊಡಗು ಗ್ರಾಮದ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಭಾರತ ಸೇವಾದಳ ಪುನಶ್ಚೇತನ ತರಬೇತಿ ಶಿಬಿರ ಉದ್ಪಾಟಿಸಿ ಮಾತನಾಡಿದರು. ರೋಟರಿ ಇಂಡಿಯಾ, ಲಿಟರಸಿ ಮಿಷನ್, ರೋಟರಿ ಟಿಚ್ ಕಾರ್ಯಕ್ರಮಗಳ ಮೂಲಕ ಸರ್ವಶಿಕ್ಷಣ ಅಭಿಯಾನ ಯೋಜನೆಯ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಯಶಸ್ಸಿಗೆ ಶಿಕ್ಷಕರ ಸಹಾಯ, ಸಹಕಾರ ಅತ್ಯಗತ್ಯವಾಗಿದೆ ಎಂದರು.
ಅನುಕೂಲ: 8 ರಿಂದ 10ನೇ ತರಗತಿಯವರೆವಿಗೂ ವ್ಯಾಸಂಗ ಮಾಡುವ ಮಕ್ಕಳಿಗೆ ಕಂಪೂಟ್ಯರ್ ಮೂಲಕ ಶಿಕ್ಷಣ ನೀಡಲು ಸಿದ್ಧತೆಗಳು ನಡೆದಿದೆ. ದೇಶದಲ್ಲಿ ಆಯಾಭಾಷೆಗೆ ಅನುಕೂಲವಾಗುವಂತೆ ಸಾಫ್ಟ್ವೇರ್ ತಯಾರಿಸಲಾಗಿದೆ. ಇದರಿಂದ ಏಕೋಪಶಿಕ್ಷಕರ ಶಾಲೆಗೆ ಹೆಚ್ಚಿನ ಅನುಕೂಲವಾಗುವುದೆಂದರು.
ಭಾರತೀಯ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ರೋಟರಿ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮ ಯಶಸ್ಸಿಗೆ ಶಿಕ್ಷಕರು ಶ್ರಮಿಸಬೇಕು. ಶಿಕ್ಷಕರಿಂದ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗುವುದು. ಇಂದಿನ ದಿವಸಗಳಲ್ಲಿ ಆತಂಕಕಾರಿ ಸಮಸ್ಯೆಗಳು ಎದುರಾಗುತ್ತಿದ್ದು, ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯವಾಗಿದೆ. ಇದನ್ನು ನೀಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ ಎಂದರು.
ಸಂಪೂರ್ಣ ಶಿಕ್ಷಣ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ. ಜಗನ್ನಾಥ್ ಮಾತನಾಡಿ, ತಾಲೂಕಿನ ಎಲ್ಲಾ ಶಿಕ್ಷಕರು ಸಂಪೂರ್ಣ ಶಿಕ್ಷಣ ಕಾರ್ಯಕ್ರಮಕ್ಕೆ ಸಹಕರಿಸಿ, ಮುಳಬಾಗಲನ್ನು ಆದರ್ಶಯುತ ತಾಲೂಕಾಗಿಸಲು ಶ್ರಮಿಸುವರೆಂದು ನುಡಿದರು.
ತಾಲೂಕು ಭಾರತ ಸೇವಾ ದಳ ಅಧ್ಯಕ್ಷ ಎನ್. ರೆಡ್ಡಪ್ಪ, ಉಪಾಧ್ಯಕ್ಷೆ ಕೆ.ಎಸ್. ಸುಮಾ, ಕಾರ್ಯದರ್ಶಿ ಶಿವಾನಂದ, ಸಂಘಟನಾ ಕಾರ್ಯದರ್ಶಿ ಟಿ. ಅರುಣಕುಮಾರ್, ಇ. ಶ್ರೀನಿವಾಸಗೌಡ, ಜೆ. ಮಂಜುನಾಥ್, ಶಿವಕುಮಾರ್, ವಿ.ಟಿ. ಸೋಮಶೇಖರ್, ಮುಖ್ಯಶಿಕ್ಷಕ ಸುಬ್ಬರಾಯಪ್ಪ, ಎನ್.ವಿ. ಲಕ್ಷ್ಮಿನಾರಾಯಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸಶೆಟ್ಟಿ, ಓಬಳರೆಡ್ಡಿ, ರಾಜಗೋಪಾಲ್ ಮತ್ತಿತರರಿದ್ದರು.