ಕನ್ನಡಪ್ರಭ ವಾರ್ತೆ, ಕೊಪ್ಪಳ, ಜ. 4
ದೇಶದ ಸಂಸತ್ತಿನ ಇತಿಹಾಸದಲ್ಲಿಯೇ ವಿರೋಧವಿಲ್ಲದೆ ಸಂವಿಧಾನ ತಿದ್ದುಪಡಿಯಾಗಿರುವುದು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ 371 ಸ್ಥಾನಮಾನ ನೀಡುವ ಸಮಯದಲ್ಲಿ ಎನ್ನುವುದು ಗಮನಾರ್ಹ ಸಂಗತಿ. ಇಂಥ ಮಹತ್ವದ ಸೌಲಭ್ಯವನ್ನು ಜಾರಿ ಮಾಡಲು ರಾಜ್ಯದಲ್ಲಿ ಸಮರ್ಥ ಸರ್ಕಾರ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಹೈ-ಕಕ್ಕೆ 371 ಜೆ ಸ್ಥಾನಮಾನ ಸಿಗಲು ಪ್ರಮುಖ ಪಾತ್ರವಹಿಸಿದ ಅವರಿಗೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದು ಸಣ್ಣ ಸಾಧನೆಯನಲ್ಲ. ಇಂಥ ಸಾಧನೆ ಮಾಡುವಲ್ಲಿ ಎಲ್ಲರ ಸಹಕಾರವೂ ಇದೆ. ಬಿಜೆಪಿಯೂ ಪ್ರಸ್ತಾವನೆ ಕಳುಹಿಸಿದೆ. ಇನ್ನು ಈ ಭಾಗದ ಜನರು ನಿರಂತರವಾಗಿ ಪ್ರಯತ್ನಿಸಿದ್ದಾರೆ. ಹೀಗಾಗಿ, ಈ ಸಾರ್ಥಕತೆಯಲ್ಲಿ ಎಲ್ಲರ ಸಹಕಾರವೂ ಇದ್ದು, ನಾವು ಕೇವಲ ಸಾಂಕೇತಿಕ ಎಂದರು.
ನಿಮ್ಮ ಪರವಾಗಿ ನಮಗೆ ಸನ್ಮಾನ ಮಾಡುತ್ತಿದ್ದಾರೆ. ಹೋರಾಟ ಮಾಡಿದ ಎಲ್ಲರಿಗೂ ಸನ್ಮಾನ ಮಾಡುವುದು ಅಸಾಧ್ಯವಾಗಿರುವುದರಿಂದ ಮುಂಚೂಣಿಯಲ್ಲಿರುವ ನಮಗೆ ಸನ್ಮಾನ ಮಾಡಿದ್ದಾರೆ. ಹೀಗಾಗಿ, ನಮಗೆ ಸಂದಿರುವ ಸನ್ಮಾನ ನಿಮ್ಮದು ಎಂದರು.
ಇಡೀ ಹೋರಾಟದ ಹಾದಿಯನ್ನು ಸ್ಮರಿಸಿದ ಅವರು, ಮಸೂದೆ ಮಂಡನೆಯಾಗುವ ವೇಳೆ ಆದ ತೊಂದರೆಗಳು, ರಾಜ್ಯ ಸರ್ಕಾರ ನಡೆದುಕೊಂಡ ರೀತಿ, ನಂತರ ಪ್ರೋತ್ಸಾಹಿಸಿದ ಬಗೆ ಸೇರಿದಂತೆ ಎಲ್ಲವನ್ನು ಎಳೆ ಎಳೆಯಾಗಿ ತೆರೆದಿಟ್ಟರು. ಇದನ್ನು ಕೆಲವರು ತಪ್ಪಾಗಿ ತಿಳಿದುಕೊಂಡು ವಿರೋಧ ವ್ಯಕ್ತಪಡಿಸಿದ್ದರು. ನಮಗೆ ತೆಲಂಗಾಣ ಮಾದರಿ ಬೇಕು ಎಂದು ಹಠ ಹಿಡಿದಿದ್ದರು ಎಂದು ತಿಳಿಸಿದರು.
ಅಚ್ಚರಿ ಎಂದರೇ ಇದು ತೆಲಂಗಾಣ ಹಾಗೂ ವಿದರ್ಭ ಮಾದರಿಯನ್ನೊಳಗೊಂಡ ವಿಶೇಷ ಮಸೂದೆಯಾಗಿದೆ. ಇದರಿಂದ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗುವುದರ ಜೊತೆಗೆ ಮೂಲಭೂತ ಸೌಲಭ್ಯಕ್ಕೂ ಅವಕಾಶ ಮಾಡಿಕೊಡಲಾಗಿದೆ. ಇಂಥ ಮಸೂದೆಯನ್ನು ವಿರೋಧಿಸುವುದು ಎಷ್ಟು ಸರಿ? ಇದನ್ನು ಎಲ್ಲರಿಗೂ ಅರ್ಥೈಸಿದ ಬಳಿಕ ಸಹಕಾರ ನೀಡಿದರು ಎಂದು ವಿವರಿಸಿದರು.
ಇಂಥ ಮಹತ್ವದ ತಿದ್ದುಪಡಿ ಮಾಡುವ ಮೂಲಕ ಹೈ-ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿರುವುದು ದೊಡ್ಡ ಆಸ್ತಿ ಇದ್ದಂತೆ. ಇದನ್ನು ಬಳಸಿಕೊಳ್ಳುವ ಹೊಣೆ ಇಲ್ಲಿಯ ಜನರದ್ದು ಹಾಗೂ ರಾಜ್ಯ ಸರ್ಕಾರದ್ದಾಗಿದೆ. ಬೇಗನೇ ಇದಕ್ಕೊಂದು ಮೂರ್ತರೂಪ ನೀಡಿ, ನಿಯಮಾವಳಿಗಳನ್ನು ರಚನೆ ಮಾಡಿ, ಅನುಷ್ಠಾನ ಮಾಡಲು ಸಮರ್ಥ ಸರ್ಕಾರ ಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಸ್ಥಿರ ಸರ್ಕಾರ ಹಾಗೂ ಜನಪರ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ ಎಂದು ಹೇಳುವುದನ್ನು ಮರೆಯಲಿಲ್ಲ. ಇನ್ನು ಎಲ್ಲವನ್ನು ನಾವೇ ಮಾಡಿದ್ದೇವೆ ಎನ್ನುವ ಜೆಡಿಎಸ್ ಕುರಿತು ಮಾತನಾಡುವುದಿಲ್ಲ. ಆದರೆ, ಜನರು ಸ್ಥಿರ ಸರ್ಕಾರವನ್ನು ಆಯ್ಕೆ ಮಾಡಬೇಕು ಮತ್ತು ಸಾಮಾಜಿಕ ನ್ಯಾಯ ಇರುವಂಥ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕು. ಕೆಜಿ, (ಕೆಜೆಪಿ) ಕ್ವಿಂಟಲ್(ಬಿಜೆಪಿ) ಪಕ್ಷಗಳನ್ನೆಲ್ಲ ದೂರ ಇಡುವಂತೆ ಕರೆ ನೀಡಿದರು.
ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಮಾತನಾಡಿ, ಇದೊಂದು ಐತಿಹಾಸಿಕ ನಿರ್ಣಯವಾಗಿದ್ದು, ಈ ಭಾಗದ ಭಾಗ್ಯದ ಬಾಗಿಲು ತೆರೆದಿದೆ. ಇದಕ್ಕಾಗಿ ಅವಿರತವಾಗಿ ಹೋರಾಟ ಮಾಡಿದ ಖರ್ಗೆ ಅವರ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಸ್ವಾಗತಿಸಿದರು.
ವೆಂಕಟರಾವ್ ಘೋರ್ಪಡೆ, ಎಚ್.ಆರ್. ಶ್ರೀನಾಥ್, ಮಲ್ಲಿಕಾರ್ಜುನ ನಾಗಪ್ಪ, ಅಮರೇಗೌಡ ಭಯ್ಯಾಪುರ, ಹಸನಸಾಬ್ ದೋಟಿಹಾಳ್, ಶಾಂತಣ್ಣ ಮುದಗಲ್, ಆಸಿಫ್ ಅಲಿ, ಕರಿಯಣ್ಣ ಸಂಗಟಿ, ರಾಘವೇಂದ್ರ ಹಿಟ್ನಾಳ, ಇಂದಿರಾ ಬಾವಿಕಟ್ಟಿ, ಎಸ್.ಬಿ. ರಡ್ಡಿ, ನಿವೃತ್ತ ಎಡಿಸಿ ಬಿ.ಪಿ. ಅಡ್ನೂರು ಉಪಸ್ಥಿತರಿದ್ದರು.