ಕುಷ್ಟಗಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ವಿವೇಚನಾ ಕೋಟಾದಡಿ ಬಿಡುಗಡೆಯಾಗಿರುವ ರು. 2 ಕೋಟಿ ಅನುದಾನ ಒಂದು ವರ್ಷದಿಂದ ಬ್ಯಾಂಕ್ ಖಾತೆಯಲ್ಲಿಯೇ ಕೊಳೆಯುತ್ತಿದೆ. ಅದರಲ್ಲೂ ಇದರ ಕುರಿತಾದ ವಿವಾದ ತಾರಕಕ್ಕೇರುತ್ತಿದೆ. ಹೀಗಾಗಿ, ಈ ವಿವಾದ ಜಿಲ್ಲಾ ಪಂಚಾಯ್ತಿಯಲ್ಲೇ ಕಗ್ಗಂಟಾಗಿದ್ದು, ಹೈಕೋರ್ಟ್ ಮೆಟ್ಟಿಲೇರುವ ಹಂತ ತಲುಪಿದೆ.
ಕೊಪ್ಪಳ ಜಿಪಂ ಅಧ್ಯಕ್ಷರ ವಿವೇಚನಾ ನಿಧಿ ಬಳಕೆ ಕುರಿತು ಉಂಟಾಗಿರುವ ವಿವಾದ ನಾನಾ ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದಿನ ಕ್ರಿಯಾಯೋಜನೆಯಂತೆ ಅನುದಾನ ಬಳಸಿಕೊಳ್ಳುವಂತೆ ಮಾಜಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಪಟ್ಟು ಹಿಡಿದಿದ್ದರೆ ಹಾಲಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಅದನ್ನು ಮರು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಇವರಿಬ್ಬರ ನಡುವಿನ ಕಾದಾಟದಲ್ಲಿ ಅನುದಾನ ಬಳಕೆಯಾಗದೇ ಕೊಳೆಯುವಂತಾಗಿದೆ. ಇದೀಗ ಸದಸ್ಯರಲ್ಲಿಯೂ ತಳಮಳವನ್ನುಂಟು ಮಾಡಿದ್ದು, ಬಂದಿರುವ ಅನುದಾನ ಬಳಕೆ ಮಾಡುವ ಕುರಿತು ನಿರ್ಣಯಕೈಗೊಳ್ಳಲು ಸಾಮಾನ್ಯ ಸಭೆ ಕರೆಯುವಂತೆ ಸದಸ್ಯರು ಆಗ್ರಹಿಸಿದ್ದಾರೆ.
ಏನಿದು ವಿವಾದ: ಈ ಹಿಂದಿನ ಜಿಪಂ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವಧಿಯಲ್ಲಿ ಅಧ್ಯಕ್ಷರ ವಿವೇಚನಾ ನಿಧಿಗೆ ರು. 2 ಕೋಟಿ ಅನುದಾನ ಬಂದಿತ್ತು. ಇದಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುದಾನ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ಅನುದಾನದಲ್ಲಿ ಬಿಲ್ಗಾರ್ ತಮ್ಮ ಕ್ಷೇತ್ರಕ್ಕೆ ರು. 60 ಲಕ್ಷ ವಿನಿಯೋಗ ಮಾಡಲು ಮುಂದಾಗಿ ಅದಕ್ಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದಿದ್ದರು.
ಯೋಜನೆ ಜಾರಿಗೂ ಮೊದಲೇ ಜ್ಯೋತಿ ಬಿಲ್ಗಾರ್ ಅಧ್ಯಕ್ಷ ಸ್ಥಾನದ ಅವಧಿ ಮುಗಿಯಿತು. ಆ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ ಆಯ್ಕೆಯಾದರು. ಅವರು ಈ ಹಿಂದಿನ ಕ್ರಿಯಾಯೋಜನೆಯನ್ನೆ ರದ್ದು ಮಾಡಿ, ನೂತನ ಕ್ರಿಯಾಯೋಜನೆ ಸಿದ್ಧ ಮಾಡಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಮಾಜಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನ ಅವಧಿಯಲ್ಲಿ ಬಂದಿರುವ ಅನುದಾನವಾಗಿರುವುದರಿಂದ ಆಗಿನ ಕ್ರಿಯಾಯೋಜನೆಯಂತೇ ಕಾಮಗಾರಿ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯ ಮೆಟ್ಟಿಲು ಏರುತ್ತೇನೆ ಎಂದು ಜ್ಯೋತಿ ಬಿಲ್ಗಾರ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ ವರದಿ: ಈ ನಡುವೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಈ ಹಿಂದೆಯೇ ಕ್ರಿಯಾಯೋಜನೆ ಸಿದ್ಧಪಡಿಸಿರುವುದರಿಂದ ಹಾಗೂ ಜ್ಯೋತಿ ಬಿಲ್ಗಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧ್ಯಕ್ಷರ ವಿವೇಚನಾ ನಿಧಿ ಬಂದಿರುವುದರಿಂದ ಅದೇ ಕ್ರಿಯಾಯೋಜನೆ ಜಾರಿ ಮಾಡುವುದೇ ಸೂಕ್ತ ಎಂದಿದ್ದಾರೆ. ಹಾಲಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಅವರಿಗೆ ಈ ಸಂಬಂಧ ಮಾಹಿತಿಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಹಾಲಿ ಅಧ್ಯಕ್ಷ ಹಿಟ್ನಾಳ್ ಪ್ರತಿಕ್ರಿಯಿಸದೇ ಇರುವುದರಿಂದ ಎಲ್ಲ ಮಾಹಿತಿಯನ್ನೊಳಗೊಂಡ ದೂರನ್ನು ಸರ್ಕಾರಕ್ಕೆ ಬರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೊಪ್ಪಳ ಜಿಪಂಗೆ ಬಂದಿರುವ ರು. 2 ಕೋಟಿ ಅನುದಾನ 'ವಿವೇಚನೆ' ಇಲ್ಲದೇ ಕೊಳೆಯುತ್ತಿದೆ.