ಕೊಪ್ಪಳ: ಕನ್ನಡ ನಾಡಿಗೆ ಕ್ರೈಸ್ ಮಿಶನರಿಗಳು ಉತ್ತಮ ಕೊಡುಗೆ ನೀಡಿವೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಸಿ.ಎಲ್. ಹೆರಕಲ್ ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನ್ಯಾಕ್ ಬಿ ಶ್ರೇಣಿ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ನೆಲದಲ್ಲಿ ಕ್ರೈಸ್ತ ಮಿಶನರಿಗಳು ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿವೆ. ಪ್ರಪಂಚದ ಅತ್ಯುತ್ತಮ ಸಂಸ್ಕಾರಯುತ ರಾಷ್ಟ್ರವೆನಿಸಿರುವ ಭಾರತ ಪುರಾಣ, ಪರಂಪರೆ, ಇತಿಹಾಸ, ಸಂಸ್ಕೃತಿ, ಸಮಾಜ, ಸಂಸ್ಕೃತಗಳಂಥ ವೈವಿದ್ಯಮಯಗಳಿಂದ ಕೂಡಿದೆ. ಅಷ್ಟೇ ಸಂಪನ್ನವಾದ ರಾಷ್ಟ್ರವಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ರೆವರೆಂಡ್ ಕಿಟೆಲ್ ಅವರು ಕನ್ನಡ ಪದಕೋಶ ಹೊರ ತಂದರು. ಶಿಸ್ತಿನ ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡಿ, ಕನ್ನಡದ ಸಾಕಷ್ಟು ಯುವಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಆರೋಗ್ಯ ಒತ್ತು ನೀಡುವ ಮೂಲಕ ಕಟ್ಟಕಡೆಯ ಬಡ ಕುಟುಂಬಕ್ಕೂ ಉತ್ತಮ ಆರೋಗ್ಯ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಡಾ. ಎಚ್.ಟಿ. ಪೋತೆ ಮಾತನಾಡಿ, ಭಾರತ ದೇಶ ಅನೇಕತೆಯಲ್ಲಿ ಏಕತೆ ಹೊಂದಿದ್ದು, ಬುದ್ಧ, ಬಸವಣ್ಣ ಬಂದರೂ ಬದಲಾವಣೆ ಬೇಗ ತಟ್ಟಲ್ಲಿಲ್ಲ. ಕ್ರಿಸ್ತ ಕೆಳಮಟ್ಟದ ಸಮುದಾಯವನ್ನು ಮೇಲೆ ಎತ್ತುವ ಕೆಲಸ ಮಾಡುತ್ತಾ ಬಂದಿದ್ದು, ಭಾರತೀಯರು ವಿಶಾಲ ಹೃದಯ ಬೆಳೆಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಪ್ರೊ. ಎಸ್.ಎಲ್. ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಫ್‌ಎಸ್ ಶಾಲೆ ಆಡಳಿತಾಧಿಕಾರಿ ಹೃದಯ ರಾಜ, ಸಂಘಟನಾ ಕಾರ್ಯದರ್ಶಿ ಡಾ. ಬಸವರಾಜ ಪೂಜಾರ, ಉಪನ್ಯಾಸಕ ಡಾ. ವೀರೇಶ್ ಬಡಿಗೇರ, ಡಾ. ಅಮರೇಶ್ ನುಗಡೋಣಿ, ಡಾ.ಎಸ್.ಎಸ್. ಅಂಗಡಿ ಪಾಲ್ಗೊಂಡಿದ್ದರು. ಡಾ. ಬಸವರಾಜ ಪೂಜಾರರ ಪಾರಂಪರಿಕ ಜನಪದೀಯ ಔಷಧಿಗಳು ಕೃತಿಯನ್ನು ಕುಲಸಚಿವ ಡಾ. ಎಚ್.ಟಿ. ಪೋತೆ ಬಿಡುಗಡೆ ಮಾಡಿದರು.