ಕೊಪ್ಪಳ: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಎಡದಂಡೆ ಕಾಲುವೆ ಆಧುನೀಕರಣದಲ್ಲಿ ಭಾರಿ ಅಕ್ರಮ ನಡೆದಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿ ತುಂಗಭದ್ರಾ, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಶನಿವಾರ ಮುನಿರಾಬಾದ್ ಬಳಿ ರಾಷ್ಟ್ರೀಯ ಹೆದ್ದಾರಿ (13) ತಡೆದು ಪ್ರತಿಭಟನೆ ನಡೆಸಿತು.
ಇದರಿಂದ ಹೆದ್ದಾರಿಯುದ್ದಕ್ಕೂ ವಾಹನ ನಿಲುಗಡೆಯಾಗಿದ್ದರಿಂದ ಸಂಚಾರ ಸಮಸ್ಯೆಯಾಗಿ ಹೆದ್ದಾರಿ ತೆರವು ಮಾಡುವಂತೆ ಪೊಲೀಸರು ಮನವೊಲಿಸದ ಬಳಿಕ ಹೆದ್ದಾರಿ ತಡೆ ಕೈಬಿಡಲಾಯಿತು. ಆದರೆ, ಬಳಿಕ ತುಂಗಭದ್ರಾ ಕಾಡಾ ಕಚೇರಿ ಎದುರು ಧರಣಿ ಮಾಡಿದರು. ಎಡದಂಡೆ ಕಾಲುವೆ ಆಧುನಿಕರಣವನ್ನು ತುರ್ತಾಗಿ ಕೈಗೊಳ್ಳಲಾಗಿದೆ. ಕಾಲುವೆಗೆ ನೀರು ಬಿಡುವ ವೇಳೆ ಅರೆಬರೆಯಾಗಿ ಮಾಡಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗಿದೆ. ಕೂಡಲೇ ಇದನ್ನು ಸ್ಥಗಿತ ಮಾಡಬೇಕು ಮತ್ತು ತನಿಖೆ ಮಾಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಆಗ್ರಹಿಸಿದರು. ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯುವಂತೆ ಸುಮಾರು ವರ್ಷಗಳ ಬೇಡಿಕೆ ಲೆಕ್ಕಿಸುತ್ತಿಲ್ಲ. ಇನ್ನು ಜಲಾಶಯಕ್ಕೆ ನಾನಾ ಮೂಲಗಳಿಂದ ಬರುತ್ತಿರುವ ತ್ಯಾಜ್ಯದಿಂದ ನೀರು ವಿಷವಾಗುತ್ತಿದೆ. ಇದ್ಯಾವುದನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಹೋರಾಟ ಅನಿವಾರ್ಯವಾಗಿದೆ. ಕೂಡಲೇ ಈ ಎಲ್ಲ ವಿಷಯಗಳಿಗೂ ಸರ್ಕಾರ ಸ್ಪಂದನೆ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟವನ್ನೇ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ಗೌರವಾಧ್ಯಕ್ಷ ಜೆ. ಭಾರದ್ವಾಜ, ಕೆ.ಬಿ. ಗೋನಾಳ, ಪಂಪಾಪತಿ ರಾಟಿ ಮತ್ತಿತರರು ನೇತೃತ್ವವಹಿಸಿದ್ದರು.
ಹೈರಾಣದ ಪೊಲೀಸರು: ಇತ್ತ ತುಂಗಭದ್ರಾ ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಇರುವುದು ಹಾಗೂ ಅತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆದಿದ್ದರಿಂದ ಪೊಲೀಸರು ಅಕ್ಷರಶಃ ಹೈರಾಣಾಗಿದ್ದರು. ಅಲ್ಲಿ ಹೆದ್ದಾರಿ ಬಂದಾದರೇ ಟ್ರಾಫಿಕ್ ಸಮಸ್ಯೆ ನಿಭಾಯಿಸಲು ಹರಸಾಹಸ ಮಾಡುತ್ತಲೇ ಪ್ರತಿಭಟನಾಕಾರರ ಮನವೊಲಿಸಿ, ಪರಿಸ್ಥಿತಿ ನಿಯಂತ್ರಣ ಮಾಡಿದರು.