ಕನ್ನಡಪ್ರಭ ವಾರ್ತೆ, ಕೊಪ್ಪಳ, ಆ. 2
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡ, ಬಲ ಸೇರಿದಂತೆ ಹಲವು ಕಾಲುವೆಗಳಿಗೆ ನ. 30ರ ವರೆಗೆ ಮುಂಗಾರು ಹಂಗಾಮಿಗೆ ನೀರು ಬಿಡಲು ಶನಿವಾರ ನಡೆದ 99ನೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತಿರ್ಮಾನಿಸಲಾಯಿತು.
ತುಂಗಭದ್ರಾ ಕಾಡಾ ಕಚೇರಿಯಲ್ಲಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಬಲದಂಡೆ ಕೆಳಮಟ್ಟದ ಕಾಲುವೆಗೆ ಸರಾಸರಿ 600 ಕ್ಯುಸೆಕ್ನಂತೆ 7.2 ಟಿಎಂಸಿ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1000 ಕ್ಯುಸೆಕ್ನಂತೆ 11.04 ಟಿಎಂಸಿ ನೀರು, ರಾಯ ಬಸವಣ್ಣ ಕಾಲುವೆಗೆ ಸರಾಸರಿ 160 ಕ್ಯುಸೆಕ್ನಂತೆ 3 ಟಿಎಂಸಿ ನೀರು, ಎಡದಂತೆ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ 3 ಸಾವಿರ ಕ್ಯುಸೆಕ್ನಂತೆ 35.76 ಟಿಎಂಸಿ ನೀರು ನವೆಂಬರ್ ಅಂತ್ಯದವರೆಗೆ ಹರಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ವಾಗ್ವಾದ: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಗುತ್ತಿಗೆ ನೌಕರರನ್ನು ಕಾಯಂ ಮಾಡುವುದು ಹಾಗೂ ಕಾಲುವೆ ದುರಸ್ತಿ ಕಾಮಗಾರಿ ಕಳಪೆಯಾಗಿದೆ ಎಂಬ ವಿಷಯದಲ್ಲಿ ವಾಗ್ವಾದ ನಡೆದಿದೆ. ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್, ಸಚಿವ ಶಿವರಾಜ ತಂಗಡಗಿ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ಸಂಸದ ಶ್ರೀರಾಮಲು ನಡುವೆ ಕಾವೇರಿದ ಚರ್ಚೆಯಾಯಿತು ಎಂದು ತಿಳಿದುಬಂದಿದೆ. ಕಾಲುವೆ ದುರಸ್ತಿ ಕಾಮಗಾರಿಯನ್ನು ವಿಳಂಬವಾಗಿ ಕೈಗೆತ್ತಿಕೊಂಡು ನೀರು ಬಿಡುವ ನೆಪದಲ್ಲಿ ತುರ್ತಾಗಿ ಮುಗಿಸಿ, ಅಪಾರ ಪ್ರಮಾಣದ ಹಣ ಲೂಟಿ ಮಾಡಲಾಗಿದ್ದು, ತನಿಖೆ ಮಾಡಬೇಕು ಎನ್ನುವ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು ಎನ್ನಲಾಗಿದೆ.
ಸಭೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ಎನ್.ಎಸ್. ಬೋಸರಾಜ, ತಿಪ್ಪರಾಜು, ಹಂಪಯ್ಯ ನಾಯಕ್, ಹಂಪನಗೌಡ ಬಾದರ್ಲಿ, ನಾಗರಾಜ, ಮೃತ್ಯುಂಜಯ ಜಿನಗಾ, ಹಾಲಪ್ಪ ಆಚಾರ್, ಪ್ರತಾಪ್ ಗೌಡ ಉಪಸ್ಥಿತರಿದ್ದರು.