ಕನ್ನಡಪ್ರಭ ವಾರ್ತೆ, ಅಂಕೋಲಾ, ಆ. 2
ತಾನು ಈ ಮೊದಲು ನೀಡಿದ ತೀರ್ಪಿನನ್ವಯ ಸೀಬರ್ಡ್ ನೌಕಾನೆಲೆ ಭೂಸಂತ್ರಸ್ತರಿಗೆ ಪರಿಹಾರಧನ ವಿತರಿಸಲು ನೌಕಾನೆಲೆ ಆಡಳಿತಕ್ಕೆ ಸರ್ವೋಚ್ಚ ನ್ಯಾಯಾಲಯವು ನಾಲ್ಕು ವಾರಗಳ ಅಂತಿಮ ಗಡುವು ವಿಧಿಸಿರುವುದು ಸಂತ್ರಸ್ತರಿಗೆ ಭರವಸೆಯ ಬೆಳಕಾಗಿದೆ. ಇದೇ ವೇಳೆಗೆ ನೌಕಾನೆಲೆ ಆಡಳಿತವು ಈ ತೀರ್ಪನ್ನು ಸಾಂಕೇತಿಕಗೊಳಿಸದೆ ಪೂರ್ಣ ಪ್ರಮಾಣದಲ್ಲಿ ನಿಗದಿತ ಗಡುವಿನೊಳಗೆ ಕಾರ್ಯರೂಪಕ್ಕೆ ತರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೋಡಿಕೊಳ್ಳಬೇಕಾಗಿದೆ ಎಂದು ಕಾರವಾರ-ಅಂಕೋಲಾ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ವೇದಿಕೆ ಅಧ್ಯಕ್ಷ ಬಿ. ಹೊನ್ನಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈನಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧಾಂಶು ಜ್ಯೋತಿ ಮುಖ್ಯೋಪಾಧ್ಯಾಯ ಮತ್ತು ರಂಗನಗೊಗೊಯ ಅವರ ಸವೋಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠವು ನೌಕಾನೆಲೆ ಆಡಳಿತಕ್ಕೆ ನಿಗದಿತ ಪರಿಹಾರಧನ ವಿತರಿಸಲು ನಾಲ್ಕು ವಾರಗಳ ಅಂತಿಮ ಗಡುವು ಮತ್ತು ಎಚ್ಚರಿಕೆ ನೀಡಿರುವುದು ಇಲ್ಲಿ ಉಲ್ಲೇಖನೀಯ. ಈ ತೀರ್ಪಿನ ಪೂರ್ಣ ಪ್ರಮಾಣದ ಅನುಷ್ಠಾನವು ಈ ನಾಲ್ಕು ವಾರಗಳ ಒಳಗೇ ಆಗಬೇಕು. ಎಲ್ಲ ಭೂಸಂತ್ರಸ್ತ ಕುಟುಂಬಗಳಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರಧನ ಲಭಿಸಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಸಂಬಂಧಿಸಿದ ಆಡಳಿತ ಯಂತ್ರವನ್ನು ಪರಿಣಾಮಕಾರಿಯಾಗಿ ಸಂವೇದನಾಶೀಲ ಮತ್ತು ಕ್ರಿಯಾಶೀಲಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
2012 ಸೆಪ್ಟೆಂಬರ್ 13ರ ಸುಪ್ರೀಂಕೋರ್ಟ್ ಅಂತಿಮ ತೀರ್ಪಿನ ಅನುಸಾರ ಎಲ್ಲ ಭೂಸಂತ್ರಸ್ತರಿಗೆ ಪ್ರತಿ ಗುಂಟೆಗೆ ರು. 11,500 ಪರಿಹಾರ ಧನವನ್ನು ಆ ತೀರ್ಪು ಪ್ರಕಟವಾದ ನಾಲ್ಕು ತಿಂಗಳೊಳಗೆ ವಿತರಿಸಬೇಕೆಂದು ನೌಕಾನೆಲೆ ಆಡಳಿತಕ್ಕೆ ಎಚ್ಚರಿಸಲಾಗಿತ್ತು. ಆದರೆ, ಎರಡು ವರ್ಷ ಸಮೀಪವಾಗುತ್ತ ಬಂದರೂ ನೌಕಾನೆಲೆ ಆಡಳಿತ ನಿರ್ಲಕ್ಷ್ಯ ತೋರುತ್ತಿರುವುದನ್ನು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ನೌಕಾನೆಲೆ ನಿರಾಶ್ರಿತರ ವೇದಿಕೆಯು ತಂದಿತ್ತು. ಇದೀಗ ಸರ್ವೋಚ್ಚ ನ್ಯಾಯಾಲಯವು ಪರಿಹಾರಧನ ವಿತರಣೆಗೆ ಅಂತಿಮ ಗಡುವು ವಿಧಿಸಿರುವುದು ನೌಕಾನೆಲೆ ಸಂತ್ರಸ್ತರಲ್ಲಿ ಭರವಸೆ ಮೂಡಿಸಿದೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಕಾರವಾರದ ದೇವದತ್ತ ಕಾಮತ್ ಸಮರ್ಥ ವಾದ ಮಂಡಿಸಿದ್ದರು ಎಂದರು. ವೇದಿಕೆಯ ಗೌರವಾಧ್ಯಕ್ಷ ಮಾಜಿ ಸಚಿವ ಪ್ರಭಾಕರ್ ರಾಣೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ಅಮದಳ್ಳಿ, ಗಣಪತಿ ಮಾಂಗ್ರೆ, ಚಂದ್ರಕಾಂತ ಖಾರ್ವಿ ಇತರರು ನಿರಂತರವಾಗಿ ಶ್ರಮಿಸಿ ನಿರಾಶ್ರಿತ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.