ಗಂಗಾವತಿ: ನಗರದ ಮೂರು ರೈಸ್ ಮಿಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಶನಿವಾರ ಬೆಳಗ್ಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ರು. 62 ಲಕ್ಷ ಮೌಲ್ಯದ ಪಡಿತರ ಅಕ್ಕಿ ಹಾಗೂ ಗೋದಿ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಬೆಳಗ್ಗೆ 6 ಗಂಟೆಗೇ ದಾಳಿ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ರೈಸ್ ಮಿಲ್‌ಗಳ ಮಾಲೀಕರು ಮಿಲ್‌ಗಳಿಗೆ ಸಂಬಂಧಿಸಿದ ದಾಖಲೆಗಳ ಸಮೇತ ನಾಪತ್ತೆಯಾಗಿದ್ದಾರೆ ಎಂದು ಆಹಾರ ಇಲಾಖೆ ಆಯುಕ್ತ ಹರ್ಷ ಗುಪ್ತ ಸುದ್ದಿಗಾರರಿಗೆ ತಿಳಿಸಿದರು. ಕೊಪ್ಪಳ ನಗರದ ಟಿಎಪಿಸಿಎಸ್ ಗೋದಾಮಿನಲ್ಲೂ ಪಡಿತರ ಅಕ್ಕಿ ದೊರೆತಿದ್ದು, ಇದರ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ಹರ್ಷ ಗುಪ್ತಾ ಹೇಳಿದರು.
ಕಾರ್ಕಳ: ಮನೆ ಕುಸಿದು ಮಗು ಸಾವು
ಮಂಗಳೂರು: ಕಾರ್ಕಳ ತಾಲೂಕಿನಲ್ಲಿ ಶನಿವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಅದರೆಡೆಗೆ ಸಿಲುಕಿದ 2 ವರ್ಷದ ಗಂಡು ಮಗು ಮೃತಪಟ್ಟಿದೆ. ಬಂಗ್ಲೆಗುಡ್ಡೆ ವಾರ್ಡ್‌ನ ಕಜೆಕ್ರಾಸ್‌ನ ಸಂಜಯ್- ಶ್ರುತಿ ಅವರ ಪುತ್ರ ಸಾಯಿಭುವನ್ (2) ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಮನೆಯೊಳಗೆ ಗೋಡೆಯ ಪಕ್ಕದಲ್ಲಿ ತಾಯಿ ಮತ್ತು ಮಗು ಮಲಗಿದ್ದರು. ಶನಿವಾರ ಬೆಳಗಿನ ಜಾವ 4.45 ಗಂಟೆಗೆ ಗೋಡೆ ಏಕಾಏಕಿ ಕುಸಿದು ಮಗುವಿನ ಮೇಲೆ ಬಿತ್ತು. ತಕ್ಷಣ ಮಗವನ್ನು ಹೊರಗೆ ತೆಗೆಯಲಾಯಿತಾದರೂ ಮಗು ಒಳಗೆ ಉಸಿರುಗಟ್ಟಿ ಮೃತಪಟ್ಟಿತ್ತು. ಮುಳುಗೆದ್ದ ಕುಮಾರಧಾರ ಸೇತುವೆ: ಸತತ ಮಳೆಯ ಪರಿಣಾಮ ತುಂಬಿ ಹರಿಯುತ್ತಿದ್ದ ಕುಮಾರಧಾರಾ ನದಿಯಲ್ಲಿ ಶನಿವಾರ ನೆರೆ ಕೊಂಚ ತಗ್ಗಿದೆ. ಹೀಗಾಗಿ ಸುಬ್ರಹ್ಮಣ್ಯ ಬಳಿ ಸೇತುವೆ ಸಂಚಾರಕ್ಕೆ ಮುಕ್ತವಾಯಿತು. ಬೆಳಗ್ಗೆ 11.30ರ ವೇಳೆಗೆ ಸೇತುವೆಯು ಪ್ರವಾಹದಿಂದ ಹೊರಬಂದು ಸಂಚಾರ ಆರಂಭವಾಯಿತು.
ನಾಪೋಕ್ಲು ಸಮೀಪದ ಶ್ರೀ ಹರಿಶ್ಚಂದ್ರ ದೇವಾಲಯ ಧಾರಾಕಾರ ಮಳೆಯಿಂದಾಗಿ ಜಲಾವೃತಗೊಂಡಿದೆ. ಕಳೆದ ಎರಡು ದಿನಗಳಿಂದ ದೇವಾಲಯಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆಯೂ ರಭಸವಾಗಿ ಮಳೆ ಸುರಿದಾಗ ದೇವಾಲಯ ಜಲಾವೃತಗೊಂಡಿತ್ತು. ಕೊಡಗು, ಉತ್ತರ ಕನ್ನಡ ಸೇರಿದಂತೆ ಶನಿವಾರ ರಾಜ್ಯದ ಹಲವೆಡೆ ಮಳೆ ಅಬ್ಬರ ಕೊಂಚ ಕಡಿಮೆಯಾಗಿದೆ.
ಹುನಗುಂದ: 58 ಪಾಲಿಷ್ ಘಟಕಕ್ಕೆ ಬೀಗ ಮುದ್ರೆ
ಬಾಗಲಕೋಟೆ: ತ್ಯಾಜ್ಯ ವಿಲೇವಾರಿಯಲ್ಲಿ ವಿಫಲವಾಗಿರುವ ಹುನಗುಂದದ 58 ಪಾಲಿಷ್ ಘಟಕಗಳನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಹೀಗಾಗಿ ಇಳಕಲ್, ಹುನಗುಂದಗಳ ಗ್ರಾನೈಟ್ ಉದ್ಯಮಕ್ಕೆ ತೀವ್ರ ಹಿನ್ನಡೆಯಾಗುವ ಸಂಭವವಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಪ್ರತಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ತಲುಪಿದೆ. ಬೀಗಮುದ್ರೆ ಕಾಣುವ ಘಟಕಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಂಭವವಿದೆ. ಹುನಗುಂದ ಹಾಗೂ ಇಳಕಲ್‌ಗಳಲ್ಲಿ ಹಾಲಿ 268 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಎರಡು ವರ್ಷ ಹಿಂದೆಯೇ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ಘಟಕಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದ ಹೆಸ್ಕಾಂ ಅಧಿಕಾರಿಗಳ ಮೇಲೆ ಘಟಕದ ಮಾಲೀಕರು ತೀವ್ರ ಹಲ್ಲೆ ನಡೆಸಿದ್ದರು.
ನಕಲಿ ಅಂಕಪಟ್ಟಿ: ಮೂವರು ಗ್ರಾಮ ಲೆಕ್ಕಿಗರ ವಜಾ
ಕೊಪ್ಪಳ: ದ್ವಿತೀಯ ಪಿಯುಸಿ ಪರೀಕ್ಷೆಯ ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಲೆಕ್ಕಿಗರ ಹುದ್ದೆ ಸಂಪಾದಿಸಿದ್ದ ಮೂವರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ. ಯಲಬುರ್ಗಾ ತಾಲೂಕು ವಜ್ರಬಂಡಿಯ ಜಯಂತ ಎಲ್. (ಮೂಲ- ನೆಲಮಂಗಲ ತಾಲೂಕು ದೊಡ್ಡಚನ್ನಹಳ್ಳಿ), ಶಿರೂರು ಗ್ರಾಮದ ಹರೀಶ್ ಎಂ. (ಮೂಲ-ಹೊಸಕೋಟೆ ತಾಲೂಕು ಮುಗಬಲಾ), ಬೇವೂರು ಗ್ರಾಮದ ಮನುರಾಧನ್ ಹನುಮಂತಗೌಡ (ಮೂಲ-ನೆಲಮಂಗಲ ತಾಲೂಕು ಓಬಳಾಪುರ) ವಜಾಗೊಂಡಿರುವ ಗ್ರಾಮಲೆಕ್ಕಿಗರು. 2012ರ ಜೂನ್ ತಿಂಗಳಲ್ಲಿ ಗ್ರಾಮ ಲೆಕ್ಕಿಗರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 33 ಅಭ್ಯರ್ಥಿಗಳ ಪೂರ್ವ ವೃತ್ತಾಂತದ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿ ಪಡೆದು, ಸ್ಥಳ ಆಯ್ಕೆಗೆ ಕೌನ್ಸೆಲಿಂಗ್ ನಡೆಸಿ, ಜ. 2, 2013ರಂದು ನೇಮಕಾತಿ ಆದೇಶವನ್ನೂ ನೀಡಲಾಗಿತ್ತು. ಆ ಪೈಕಿ 25 ಗ್ರಾಮ ಲೆಕ್ಕಿಗರ ದ್ವಿತೀಯ ಪಿಯುಸಿ ಅಂಕ ಪಟ್ಟಿಯ ನೈಜತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಕೋರಿದ್ದರು. ಈ ವೇಳೆ ಜಯಂತ್ ಎಲ್., ಹರೀಶ್ ಎಂ. ಮತ್ತು ಮನುರಾಧನ್ ಎಚ್. ಎಂಬುವರ ಅಂಕಪಟ್ಟಿಗಳು ನಕಲಿ ಎಂದು ಇಲಾಖೆ ವರದಿ ನೀಡಿದೆ.
ಗುಂಪುಗಾರಿಕೆ ಗಂಟುಮೂಟೆ ಕಟ್ಟುವೆ
ಬಳ್ಳಾರಿ: ಗುಂಪುಗಾರಿಕೆ ಗಂಟುಮೂಟೆ ಕಟ್ಟಿ ಆತ್ಮವಿಶ್ವಾಸದಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ವಿಧಾನಸಭೆ ಉಪಚುನಾವಣೆ ಎದುರಿಸುತ್ತೇವೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಕಚೇರಿಯ ಪೀಠೋಪಕರಣ ಧ್ವಂಸ ಮಾಡಿದವರು ನಮ್ಮವರೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಮಾನ್ಯ. ಅವರು ಒಡೆದಿದ್ದು ಅವರ ಮನೆಯನ್ನೇ, ಬೇರೆಯವರ ಮನೆಯನ್ನಲ್ಲ. ಕಾರ್ಯಕರ್ತರ ನೋವು ಅರ್ಥವಾಗಿದೆ. ಕ್ಷೇತ್ರದಲ್ಲಿ 18ರಿಂದ 19 ಆಕಾಂಕ್ಷಿಗಳಿದ್ದರು. ಎಲ್ಲರಿಗೂ ಟಿಕೆಟ್ ಕೊಡಲಾಗದು. ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಮುಖಂಡರು ಸೇರಿ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಅಸಮಾಧಾನಗೊಂಡಿರುವ ಆಕಾಂಕ್ಷಿಗಳನ್ನು ಸಮಾಧಾನ ಮಾಡುತ್ತೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಶನಿವಾರ ನಾಮಪತ್ರ ಸಲ್ಲಿಸಿದರು. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಮಗ ಗಣೇಶ್ ಹುಕ್ಕೇರಿ ನಾಮಪತ್ರ ಸಲ್ಲಿಸಿದರು.
ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿ ಪರಾರಿ
ಭಟ್ಕಳ: ತಾಲೂಕಿನ ಯಲ್ವಡಿಕವರ್ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಮಧ್ಯ ವಯಸ್ಕ ವ್ಯಕ್ತಿ ಅತ್ಯಾಚಾರ ಎಸಗಿ ಪರಾರಿಯಾದ ಘಟನೆ ಶನಿವಾರ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಾರೆ ಕೆಲಸ ಮಾಡುವ ನಾರಾಯಣ ಈರಪ್ಪ ನಾಯ್ಕ (40) ಎಂಬಾತ ಯುವತಿ ಮನೆಗೆ ನುಗ್ಗಿ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿ ಕೂಗಿಕೊಂಡಾಗ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದಾರೆ. ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಈತ ಹಿಂದೆಯೂ ಎರಡು ಬಾರಿ ಈಕೆ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಮನೆಯವರು ಹೇಳುತ್ತಾರೆ. ಯುವತಿಯ ಸಹೋದರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಿಎಸ್‌ಐ ಮಂಜುನಾಥ ಸೆ. 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಲೆ ಬೀಸಿದ್ದಾರೆ.
ಬೆಳಗಾವಿಯ ತಂಟೆಗೆ ಬಂದರೆ ಹುಷಾರ್
ಕೋಲಾರ: ರಾಜಕೀಯ ಲಾಭಕ್ಕಾಗಿ ಅನಗತ್ಯ ವಿವಾದ ಸೃಷ್ಟಿಸಿ ಕಾನೂನು ಸುವ್ಯವಸ್ಧೆಗೆ ಭಂಗ ಉಂಟು ಮಾಡಿದರೆ ಎಂಇಎಸ್ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರುದ್ದೇಶದಿಂದ ಬೆಳಗಾವಿಯ ವಿಚಾರ ಕೈಗೆತ್ತಿಕೊಂಡು ಸಂಘರ್ಷಕ್ಕೆ ದಾರಿ ಮಾಡಿದಲ್ಲಿ ಎಂಇಎಸ್, ಶಿವಸೇನೆ ಸಂಘಟನೆಗಳಿಗೆ ತಕ್ಕ ಶಾಸ್ತಿ ಮಾಡುತ್ತೇನೆ. ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಸೇರಿದಂತೆ ಬೇರೆ ಯಾರೇ ಆದರೂ ಕರ್ನಾಟಕದ ನೆಲ-ಭಾಷೆ ವಿರುದ್ಧ ದ್ವನಿ ಎತ್ತಿದರೆ ನಮ್ಮ ಸರ್ಕಾರ ಕೈಕಟ್ಟಿ ಕೂರುವುದಿಲ್ಲ ಎಂದರು. ಯಳ್ಳೂರಿನಲ್ಲಿ ನಡೆದ ಘಟನೆಗಳ ಹಿನ್ನಲೆಯಲ್ಲಿ ಸರ್ಕಾರ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅವೆಲ್ಲಾ ಈಗಾಗಲೇ ತೆಗೆದುಕೊಂಡಿದೆ ಎಂದರು.