ಕೊಪ್ಪಳ: ಪರೀಕ್ಷೆಗೂ ಮುನ್ನ ಕೊಪ್ಪಳದಲ್ಲಿ ನಾಪತ್ತೆಯಾದ ಪ್ರಶ್ನೆ ಪತ್ರಿಕೆಗಳು ಬೆಂಗಳೂರಿನಲ್ಲಿ ಪತ್ತೆಯಾಗಿರುವುದರಲ್ಲದೆ ಪ್ರಮುಖ ರೂವಾರಿಯನ್ನು ದಾಖಲೆ ಸಮೇತ ಸೆರೆ ಹಿಡಿಯಲಾಗಿತ್ತು. ಈಗ ಮತ್ತೊಬ್ಬ ಶಿಕ್ಷಕನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಬಾಗಲಕೋಟೆ ನಿವಾಸಿಯಾಗಿದ್ದು, ಜಿಲ್ಲೆಯ ವಿವಿಧೆಡೆ ಅಪಾರ ಆಸ್ತಿ ಹೊಂದಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಈತನ ಪತ್ನಿಯೂ ಕೊಪ್ಪಳ ಜಿಲ್ಲೆಯಲ್ಲಿಯೇ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆಯೂ ಈ ಪ್ರಕರಣದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇವರ ಮೂಲಕ ಕೊಪ್ಪಳದಲ್ಲಿ ಪ್ರಶ್ನೆ ಪತ್ರಿಕೆಯನ್ನು ಜೆರಾಕ್ಸ್ ಮಾಡಿ ಮಾರಾಟ ಮಾಡುವ ಬದಲು ಕೈಬರಹದಲ್ಲಿ ಬರೆದು ಮಾರಾಟ ಮಾಡುವ ಮೂಲಕ ಸುಳಿವು ಸಿಗದಂತೆ ಎಚ್ಚರ ವಹಿಸಿದ್ದಾರೆ ಎನ್ನುವುದು ವಿಚಾರಣೆಯಿಂದ ತಿಳಿದಿದೆ.
ಟಿಇಟಿ ಪ್ರಶ್ನೆ ಪತ್ರಿಕೆಗಳು ಕೊಪ್ಪಳದ ಖಜಾನೆಯಿಂದಲೇ ಎತ್ತಂಗಡಿಯಾಗಿದ್ದು, ಇದಕ್ಕೆ ಖಜಾನಾಧಿಕಾರಿಗಳು ಅನಧಿಕೃತವಾಗಿ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಖಜನಾಧಿಕಾರಿ ಪ್ರಶ್ನೆ ಪತ್ರಿಕೆ ಸಂಗ್ರಹ ಮಾಡುವ ವೇಳೆ ಅನಧಿಕೃತ ಅಥವಾ ಅಧಿಕೃತವಾಗಿ ಗೈರು ಹಾಜರಾಗುವುದಕ್ಕೆ ಅವಕಾಶವೇ ಇಲ್ಲ. ಪ್ರಶ್ನೆ ಪತ್ರಿಕೆ ಜವಾಬ್ದಾರಿ ಇರುವುದರಿಂದ ಹಾಗೆ ಖಜಾನೆಯ ಕೀ ಯಾರದೋ ಕೈಯಲ್ಲಿ ಕೊಟ್ಟು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೀ ಕೊಟ್ಟವರು, ಪಡೆದವರನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಚಿಂತನೆ ನಡೆಸಿದೆ.
ಇದಕ್ಕೂ ಮುನ್ನ ಸೆರೆ ಸಿಕ್ಕಿರುವ ಶಿವಕುಮಾರ್ ನೀಡಿದ ಮಾಹಿತಿ ಆಧರಿಸಿ ಅಕ್ರಮದ ಜಾಡು ಹಿಡಿದು ಹೊರಟಿದ್ದಾರೆ. ಇದರ ಆಧಾರದ ಮೇಲೆಯೇ ಮತ್ತೊಬ್ಬನನ್ನು ವಶಕ್ಕೆ ತೆಗೆದುಕೊಂಡಿರುವುದರಿಂದ ಅನೇಕ ಮಾಹಿತಿಗಳು ಗೊತ್ತಾಗುತ್ತಿವೆ. ಡಿಡಿಪಿಐ ಕಚೇರಿಯ ಕೆಲ ಸಿಬ್ಬಂದಿ ಹಾಗೂ ಕೆಲ ಶಿಕ್ಷಕರು ಪಾಲುದಾರರಾಗಿರುವುದು ಗೋಚರವಾಗಿದೆ.
ಹಳೆ ಪ್ರಕರಣದಲ್ಲೂ ಭಾಗಿ: ಈ ಅಕ್ರಮದ ಕುರಿತು ತನಿಖೆ ನಡೆಸುವ ವೇಳೆ ಈ ಹಿಂದೆ ಪಿಡಿಒ ಪರೀಕ್ಷೆ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮದ ಮಾಹಿತಿಯೂ ತಿಳಿದಿದೆ.
ಕೆಲ ಅಧಿಕಾರಿಗಳೇ ಪರೀಕ್ಷಾ ಕೇಂದ್ರದ ಹೊರಗೆ ಮೊಬೈಲ್ ಮೂಲಕ ಅಭ್ಯರ್ಥಿಗಳಿಗೆ ಉತ್ತರ ನೀಡುತ್ತಿರುವುದನ್ನು ಈ ಹಿಂದೆ ಕೊಪ್ಪಳ ಪೊಲೀಸರು ಗಂಗಾವತಿಯಲ್ಲಿ ಭೇದಿಸಿದ್ದರು. ಈ ಕುರಿತು ವ್ಯಾಪಕ ತನಿಖೆ ನಡೆಯಿತಾದರೂ ರಾಜಕೀಯ ಒತ್ತಡದಿಂದ ಪ್ರಕರಣ ಮುಚ್ಚಿ ಹಾಕಲಾಯಿತು. ಈ ಪ್ರಕರಣದಲ್ಲಿ ಈಗ ಟಿಇಟಿ ಅಕ್ರಮದಲ್ಲಿ ಭಾಗಿಯಾದವರ ಕೈವಾಡ ಇರುವುದು ಗೊತ್ತಾಗಿದೆ. ಸೆರೆಸಿಕ್ಕಿರುವ ಕೊಪ್ಪಳದ ಶಿಕ್ಷಕನೊಬ್ಬ ಅನೇಕ ನೇಮಕಾತಿ ಪರೀಕ್ಷೆ ಅಕ್ರಮ ಮಾಡಿ ಕೋಟ್ಯಂತರ ರುಪಾಯಿ ಆಸ್ತಿ ಮಾಡಿದ್ದಾನೆ. ಈಗ ಈ ಆಸ್ತಿಯ ಮೂಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.
-ವಿಶೇಷ ವರದಿ