ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 10
ಕಳೆದ ನಾಲ್ಕಾರು ದಿನಗಳಿಂದ ನಿತ್ಯವೂ ಸುರಿಯುತ್ತಿರುವ ಮಳೆ ಬರದ ಭಯವನ್ನೇ ನೀಗಿಸಿದೆ. ಈ ಬಾರಿ ಬರ ಕಟ್ಟಿಟ್ಟ ಬುತ್ತಿ ಎನ್ನುವ ಆತಂಕ ದೂರಾಗುವಂತೆ ಮಳೆಯಾಗಿದೆ.
ಇದು ಜಿಲ್ಲಾದ್ಯಂತ ರೈತರು ಮಾಡಿದ ವಿವಿಧ ಪ್ರಾರ್ಥನೆಯ ಫಲವೋ ಗೊತ್ತಿಲ್ಲ. ಆದರೆ, ಅತ್ಯುತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಗರಿಗೆದರಿವೆ. ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಈಗ ರಂಟೆ, ಕುಂಟೆ ಮೇಳಿ ಹಿಡಿದು ಹೊಲದಲ್ಲಿ ಕೇಕೆ ಹಾಕುತ್ತಿದ್ದಾನೆ.
ಬೀಜ ಮಳೆಯಾದ ರೋಹಿಣಿ ಮಳೆಯ ಕೈಕೊಟ್ಟಿದ್ದರಿಂದ ಮುಂದಿನ ಮಳೆ ಆಗುವುದು ದುಸ್ತರ ಎನ್ನುವಂತೆ ಆಗಿತ್ತು. ಆದರೆ, ರೋಹಿಣಿ ಕೈಕೊಟ್ಟರೂ ನಂತರ ಮಳೆ ಅತ್ಯುತ್ತಮವಾಗಿ ಆಗುತ್ತಿದೆ. ಅದು ಕಳೆದ ನಾಲ್ಕು ದಿನಗಳ ಹಿಂದೆ ಸಂಜೆಯಾಗುತ್ತಿದ್ದಂತೆ ಒಂದೆರಡು ಗಂಟೆ ಸುರಿಯುತ್ತಿದೆ. ರಭಸವಾಗಿಯೂ ಬಾರದೇ ನಿಧಾನವಾಗಿ ಆಗುತ್ತಿರುವುದರಿಂದ ಇದನ್ನು ಹಸಿ ಮಳೆಯೇ ಎಂದು ಹೇಳುತ್ತಿದ್ದಾರೆ. ಈ ವರ್ಷದಲ್ಲಿಯೇ ಈಗ ನಾಲ್ಕು ದಿನಗಳಿಂದ ಆಗುತ್ತಿರುವ ಮಳೆ ಕೃಷಿ ಚಟುವಟಿಕೆಗೆ ಇಂಬು ನೀಡಿದೆ ಎನ್ನುತ್ತಾರೆ.
ಅದರಲ್ಲೂ ಮಳೆ ದಿನವಿಡಿ ಬಿಡುವು ನೀಡಿ, ಬಿಸಿಲು ಗಾಳಿ ಬೀಸಿ ಸಂಜೆಯಾಗುತ್ತಿದ್ದಂತೆ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗೂ ಅನುಕೂಲವಾಗಿದೆ. ಎಡೆಬಿಡದೆ ಸುರಿಯುತ್ತಿದ್ದರೆ ಸಮಸ್ಯೆಯಾಗುತ್ತಿತ್ತು. ಆದರೆ, ಕಳೆದ ನಾಲ್ಕು ದಿನಗಳು ಕೇವಲ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಅದು ಒಂದೆರಡು ಗಂಟೆ ಮಾತ್ರ. ಉಳಿದ ಅವಧಿಯಲ್ಲಿ ಮಳೆ ಇರುವುದಿಲ್ಲವಾದ್ದರಿಂದ ಉಳುಮೆ, ಬಿತ್ತನೆಗೂ ಅನುಕೂಲ ಎಂದೇ ರೈತರ ವಿಶ್ಲೇಷಣೆ.
49 ಮಿ.ಮೀ ಸರಾಸರಿ: ಜಿಲ್ಲಾದ್ಯಂತ ಜುಲೈ ತಿಂಗಳ ಅಂತ್ಯಕ್ಕೆ 77.8 ಮಿಲಿ ಮೀಟರ್ ಮಳೆಯಾಗಬೇಕಾಗಿದೆಯಾದರೂ ಮೊದಲ ಹತ್ತು ದಿನಗಳಲ್ಲಿಯೇ 49.87 ಮಿ.ಮೀ. ಮಳೆಯಾಗಿದೆ. ಹೀಗಾಗಿ, ಇದು ಉತ್ತಮ ಮಳೆ ಎಂದು ಕೃಷಿ ಇಲಾಖೆ ಹೇಳುತ್ತಿದೆ. ಇನ್ನು 20 ದಿನಗಳ ಕಾಲ ಇರುವುದರಿಂದ ಸರಾಸರಿಗಿಂತಲೂ ಈ ಬಾರಿ ಉತ್ತಮ ಮಳೆಯೇ ಆಗುತ್ತದೆ ಎನ್ನುತ್ತಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ಜುಲೈ ಅಂತ್ಯಕ್ಕೆ ಸರಾಸರಿ 81 ಮಿಲಿ ಮೀಟರ್ ಮಳೆಯಾಗಬೇಕಾಗಿದ್ದರೂ ಈಗಾಗಲೇ 5.60 ಮಿ.ಮೀ. ಮಳೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ ಸರಾಸರಿ 79 ಮಿ.ಮೀ. ಮಳೆಯಾಗಬೇಕಾಗಿದ್ದರೂ 64.25 ಮಿ.ಮೀ. ಮಳೆಯಾಗಿದೆ. ಯಲಬುರ್ಗಾ ತಾಲೂಕಿನಲ್ಲಿ 73 ಸರಾಸರಿಗೆ 51.59 ಮಿ.ಮೀ. ಮಳೆಯಾಗಿದೆ. ಗಂಗಾವತಿ ತಾಲೂಕಿಗೆ 78 ಮಿ.ಮೀ. ಮಳೆಯಾಗಬೇಕಾಗಿದ್ದರೂ ಕೇವಲ 30.04 ಮಿ.ಮೀ. ಮಳೆಯಾಗಿದೆ. ಕುಷ್ಟಗಿ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದ್ದರೆ ಗಂಗಾವತಿ ತಾಲೂಕಿನಲ್ಲಿ ತೀರಾ ಮಳೆ ಕಡಿಮೆಯಾಗಿದೆ. ಜಿಲ್ಲಾದ್ಯಂತ 2.52 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ ಜೂನ್ ಅಂತ್ಯಕ್ಕೆ ಕೇವಲ ಶೇ. 28ರಷ್ಟು ಬಿತ್ತನೆಯಾಗಿದೆ. ಇದರಲ್ಲಿ ಮಳೆ ಅಭಾವದಿಂದ ಬಹುತೇಕ ಮೊಳಕೆಯೇ ಒಡದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಈಗ ವಾರದಿಂದ ಸುರಿಯುತ್ತಿರುವ ಮಳೆಯಿಂದ ಮತ್ತೆ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಈಗ ಅತೆ ಹೆಚ್ಚಾಗಿ ಬಿತ್ತನೆ ಕಾರ್ಯ ನಡೆದಿರುವುದರಿಂದ ಇನ್ನೊಂದು ವಾರದಲ್ಲಿ ಮುಂಗಾರಿನ ಶೇ. 80ರಷ್ಟು ಬಿತ್ತನೆಯಾಗಿದೆ ಎಂದೇ ಹೇಳಲಾಗುತ್ತದೆ.