ಕೊಪ್ಪಳ

ಬಾಣಲೆಯಿಂದ ಬೆಂಕಿಗೆ ತಳ್ಳಬೇಡಿ

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 15
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸುವಂತೆ ಗುಲ್ಬರ್ಗದ ವಕೀಲರು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು ಎಂಬುದು ಇದಕ್ಕೆ ಕಾರಣವಾದರೂ, ಈ ಎರಡೂ ಜಿಲ್ಲೆಗಳ ಜನರನ್ನು ಬಾಣಲೆಯಿಂದ ಬೆಂಕಿಗೆ ದೂಡುವ ಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಹೈಕೋರ್ಟ್ ಪೀಠಗಳನ್ನು ಧಾರವಾಡ ಮತ್ತು ಗುಲ್ಬರ್ಗದಲ್ಲಿ ಆರಂಭಿಸಿದ ಉದ್ದೇಶವೇ ನ್ಯಾಯಾಲಯಗಳನ್ನು ಜನರ ಹತ್ತಿರಕ್ಕೆ ತರುವುದು. ಸುಪ್ರೀಂ ಕೋರ್ಟ್ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಬೇಕೆಂಬ ಒತ್ತಾಯ ಇರುವುದೂ ಇದೇ ಕಾರಣಕ್ಕೆ. ಉತ್ತರ ಕರ್ನಾಟಕದ ಜನರು ನ್ಯಾಯಕ್ಕಾಗಿ ಬೆಂಗಳೂರಿಗೆ ಓಡಾಡುವ ಕಷ್ಟವನ್ನು ಗಮನಿಸಿ ಗುಲ್ಬರ್ಗ ಹಾಗೂ ಧಾರವಾಡದಲ್ಲಿ ಹೈಕೋರ್ಟ್ ಪೀಠಗಳನ್ನು ಸ್ಥಾಪಿಸಲಾಗಿದೆ. ಈ ಸಂಬಂಧ ಸರ್ಕಾರ ಗೆಜೆಟ್ ಮಾಡಿದೆ. ಸುಪ್ರೀಂ ಕೋರ್ಟ್ ಕೂಡ ಇದು ಸೂಕ್ತ ನಿರ್ಧಾರ ಎಂದಿದೆ.
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗೆ ಗುಲ್ಬರ್ಗ ಕನಿಷ್ಠ 300 ಕಿ.ಮೀ. ದೂರವಿದ್ದರೆ, ಧಾರವಾಡ ಕ್ರಮವಾಗಿ 150 ಹಾಗೂ 250 ಕಿ.ಮೀ. ದೂರದಲ್ಲಿದೆ. ಹೀಗಾಗಿ, ಎರಡೂ ಜಿಲ್ಲೆಗಳಿಗೆ ಧಾರವಾಡ ಪೀಠ ಇದ್ದುದರಲ್ಲಿ ಹೆಚ್ಚು ಅನುಕೂಲಕರ. ಆದರೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ, ಗುಲ್ಬರ್ಗ ಹೈಕೋರ್ಟ್ ಪೀಠದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದ್ದಕ್ಕೆ ಕೊಪ್ಪಳ, ಬಳ್ಳಾರಿಯನ್ನು ಈ ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ಸರಿಯೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರೇ ವಾಸಿ: ಕೊಪ್ಪಳ ಮತ್ತು ಬಳ್ಳಾರಿಗೆ ಗುಲ್ಬರ್ಗಕ್ಕಿಂತ ಬೆಂಗಳೂರಿಗೆ ಬರುವುದೇ ಸುಲಭ. ಒಂದೊಮ್ಮೆ ಧಾರವಾಡ ಪೀಠದ ವ್ಯಾಪ್ತಿಯಿಂದ ತಮ್ಮನ್ನು ಬೇರ್ಪಡಿಸಿದರೆ, ಗುಲ್ಬರ್ಗಕ್ಕಿಂತ ಬೆಂಗಳೂರಿನ ಹೈಕೋರ್ಟ್ ವ್ಯಾಪ್ತಿಗೇ ಸೇರಿಸಿ ಎಂದು ಜನತೆ ಆಗ್ರಹಿಸಿದ್ದಾರೆ.
ಆಲದ ಮರ: ನಿಜಾಮನ ಆಳ್ವಿಕೆಯಲ್ಲಿ ಹೈ-ಕ ವ್ಯಾಪ್ತಿಯಲ್ಲಿದ್ದ ಕಾರಣಕ್ಕಾಗಿ ಈಗಲೂ ಅಂಥ ಶೋಷಣೆ ಮುಂದುವರಿಸಬೇಕು ಎನ್ನುವುದು ಅಮಾನವೀಯತೆಯ ಪರಮಾವಧಿ. ಸ್ವಾತಂತ್ರ್ಯಕ್ಕಾಗಿ ಉಳಿದವರಿಗಿಂತ ಹೆಚ್ಚು ಅವಧಿಗೆ ಹೋರಾಡಿದೆವು. ಈಗಲೂ ತಮ್ಮನ್ನು ಗುಲ್ಬರ್ಗ ಪೀಠದ ವ್ಯಾಪ್ತಿಗೆ ಸೇರಿಸಿದರೆ, ಮತ್ತೊಂದು ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆಯನ್ನು ಕೊಪ್ಪಳ, ಬಳ್ಳಾರಿಯ ನ್ಯಾಯವಾದಿಗಳು ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠಕ್ಕಾಗಿ ನಡೆದ ಹೋರಾಟ ತೀವ್ರಗೊಳ್ಳಲು ಕೊಪ್ಪಳವೂ ಕಾರಣ. ಪೀಠ ಎಲ್ಲಿ ಸ್ಥಾಪನೆಯಾಗಬೇಕು ಎನ್ನುವ ಪ್ರಶ್ನೆ ಎದುರಾದಾಗ ಕೊಪ್ಪಳದಲ್ಲಿ ಬೃಹತ್ ಸಭೆ ನಡೆಸಲಾಗಿತ್ತು. ಹೈ-ಕ ಮತ್ತು ಮುಂಬೈ-ಕರ್ನಾಟಕದಲ್ಲಿ ಪೀಠ ಸ್ಥಾಪನೆ ಮಾತು ಬಂದಾಗ, ಹೈ-ಕ ಪ್ರದೇಶದ ಪೀಠ ಕೊಪ್ಪಳದಲ್ಲೇ ಆಗಲಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರಾಜಕೀಯ ಇಚ್ಛಾಶಕ್ತಿ ಸಾಲದೆ ಅದು ಈಡೇರಿರಲಿಲ್ಲ.

ಬಳ್ಳಾರಿ ಮತ್ತು ಕೊಪ್ಪಳವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಧಾರವಾಡ ಹೈಕೋರ್ಟ್ ಪೀಠಕ್ಕೆ ಸೂಕ್ತ ಎಂದು ಸೇರಿಸಿದ್ದಾರೆ. ಪದೇ ಪದೆ ಕ್ಯಾತೆ ತೆಗೆಯುವುದು ಸರಿಯಲ್ಲ. ಮುಂದಿನ ನಿರ್ಧಾರ ಕೈಗೊಳ್ಳಲು ಜು. 18ರಂದು ವಕೀಲರ ಸಭೆ ನಡೆಸಲಾಗುತ್ತದೆ.
- ಎ.ವಿ. ಕಣವಿ, ಜಿಲ್ಲಾಧ್ಯಕ್ಷರು, ವಕೀಲರ ಸಂಘ, ಕೊಪ್ಪಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ