ಗಂಗಾವತಿ: ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿರುವ ಬಾಬಾ ರಾಮದೇವನನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು ಸಿಪಿಐಎಂಎಲ್ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸನಗೌಡ ಸುಳೆಕಲ್ ತಿಳಿಸಿದ್ದಾರೆ. ರಾಮದೇವ ಬಾಬಾ ದಲಿತರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ, ತಾಲೂಕಾಧ್ಯಕ್ಷ ಮೋಹನ್, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಎಂ. ಯೇಸಪ್ಪ, ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷ ಬಾಷಾ, ಆರ್‌ವೈಎ ಜಿಲ್ಲಾಧ್ಯಕ್ಷ ಹುಸೇನ್ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಮದೇವನನ್ನು ಭಾರತದಿಂದ ಹೊರ ಹಾಕಬೇಕು. ಆತನ ಆಸ್ತಿ ಮುಟ್ಟುಗೋಲು ಮಾಡಿ, ವಿದೇಶದಲ್ಲಿ ಕೂಡಿಟ್ಟ ಹಣವನ್ನು ಭಾರತಕ್ಕೆ ತರಬೇಕು, ಈತನ ಒಡೆತನದ ನಕಲಿ ಪತಂಜಲಿ ಆಯುರ್ವೇದಿಕ್ ಔಷಧಗಳನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಸಲಾಯಿತು. ದಲಿತರ ವಿರುದ್ಧ ಹೀನಾಯವಾಗಿ ಮಾತನಾಡುವ ಇಂತಹ ಢೋಂಗಿ ಬಾಬಾಗಳ ಮತ್ತು ರಾಜಕಾರಣಿಗಳ ವಿರುದ್ಧ ಉಗ್ರ ಹೋರಾಟ ಮಾಡಲು ಪಕ್ಷ ತೀರ್ಮಾನಿಸಿದೆ. ರಾಮದೇವನನ್ನು ಭಾರತದಿಂದ ಹೊರಹಾಕಲು ಒತ್ತಾಯಿಸಿ ರಾಷ್ಟ್ರಪತಿಗೆ ಮನವಿ ಕಳುಹಿಸಲಾಗುವುದೆಂದು ಬಸನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.