ಕನಕಗಿರಿ: ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬ ಪಟ್ಟಣದ ಐತಿಹಾಸಿಕ ದೇವಸ್ಥಾನಗಳಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಐತಿಹಾಸಿಕ ಪ್ರಸಿದ್ಧ ಪುಷ್ಕರಣಿ ಪಕ್ಕದಲ್ಲಿನ ಏಳು ಹೆಡೆ ನಾಗದೇವರಿಗೆ ಮಹಿಳೆಯರು ಹಾಲು ಎರೆದರು. ಶೇಂಗಾ, ಹೆಸರು, ಪುಟಾಣಿ, ಮಂಡಕ್ಕಿ ಸೇರಿದಂತೆ ವಿವಿಧ ಬಗೆಯ ಉಂಡಿಗಳನ್ನು ತಯಾರಿಸಿ, ಅದರಲ್ಲೂ ದೇವರ ನೈವೇದ್ಯಕ್ಕೆ ಮಾತ್ರ ಕರಿ ಅಥವಾ ಬಿಳಿ ಎಳ್ಳಿನ ಚಿಗಳಿ (ಎಳ್ಳು ಉಂಡಿ) ತಯಾರಿಸಿ ದೇವರಿಗೆ ಅರ್ಪಿಸಲಾಯಿತು.
ಸಹೋದರ, ಸಹೋದರಿಯರ ಬಾಂಧವ್ಯ ಬೆಸೆಯುವ ಹಾಗೂ ಶ್ರಾವಣ ಮಾಸದಲ್ಲಿ ಹಿಂದೂಗಳಿಗೆ ಇದು ವಿಶೇಷ ಹಬ್ಬ. ಉತ್ತರ ಕರ್ನಾಟಕ ಭಾಗದಲ್ಲಿ ಎರಡು ದಿನ ಈ ಹಬ್ಬ ಆಚರಿಸುತ್ತಿರುವುದು ಇಂದಿಗೂ ನಡೆಯುತ್ತಿದೆ. ಮೊದಲನೇ ದಿನ ಊರುಗಳಲ್ಲಿನ ದೇವರಿಗೆ ಹಾಲೆರೆಯುವುದು. ಎರಡನೇ ದಿನ ಜಮೀನಿನಲ್ಲಿರುವ ದೇವರಿಗೆ ವಿಶಿಷ್ಟ ಪೂಜೆ ಸಲ್ಲಿಸಿ ಹಾಲು ಹಾಕುವುದು ವಾಡಿಕೆ ಇದೆ.