ಯಲಬುರ್ಗಾ: ತಾಲೂಕಿನಾದ್ಯಂತ ಗುರುವಾರ ಮಹಿಳೆಯರು, ಮಕ್ಕಳು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಹಬ್ಬ ಆಚರಿಸಿದರು.
ನಾಗರ ಪಂಚಮಿ ನಿಮಿತ್ತ ಎಳ್ಳು, ರವಾ ಉಂಡಿ ಕಟ್ಟಿ ಕಪ್ಪು ಮಣ್ಣಿನಲ್ಲಿ ಹದಿನೈದು ದಿನ ಮೊದಲೇ ಗೋದಿಯನ್ನು ಹಾಕಿ ನೆರಳಲ್ಲಿ ಮುಚ್ಚಿಟ್ಟು ಬೆಳೆಸಿದ ಗೋದಿ ಸಸಿಯನ್ನು ನಾಗಪ್ಪನಿಗೆ ಅರ್ಪಿಸಿ ಹಾಲು ಎರೆದರು. ಹೂ, ಕಾಯಿ, ಹಣ್ಣು ಹೀಗೆ ಹಲವು ಪೂಜಾ ಸಾಮಗ್ರಿಗಳೊಂದಿಗೆ ಕಲ್ಲು ನಾಗಪ್ಪ ಇರುವ ದೇವಸ್ಥಾನಗಳಿಗೆ ತೆರಳಿ ಹಾಲು ಎರೆದರು. ಹಾಲೆರೆದ ನಂತರ ಓಣಿಗಳ ಗಿಡಗಳಿಗೆ ಜೋಕಾಲಿ ಕಟ್ಟಿ ದೊಡ್ಡವರು, ಚಿಕ್ಕವರು ಎನ್ನದೆ ಆಡಿದರು. ಇದಕ್ಕೂ ಒಂದು ದಿನ ಮೊದಲೇ ನಾಗರ ಪಂಚಮಿ ಹಬ್ಬ ಪ್ರಾರಂಭವಾಗುವುದಕ್ಕಿಂತ ಐದಾರು ದಿನಗಳ ಮುಂಚಿತವಾಗಿ ರೊಟ್ಟಿ ತಯಾರಿಸಿ ಬಂಧು, ಬಳಗದವರಿಗೆ ಹಂಚಿ ರೊಟ್ಟಿ ಹಬ್ಬ ಆಚರಿಸಿದರು.
ಮಹಿಳೆಯರ ಹಬ್ಬ ಎಂದೇ ಕರೆಯಲ್ಪಡುವ ನಾಗರ ಪಂಚಮಿ ಪಟ್ಟಣದ ಸಿದ್ಧರಾಮೇಶ್ವರ ಹಿರೇಮಠ, ಬಸಲಿಂಗೇಶ್ವರ ಧರಮುರಡಿಮಠ, ದುರ್ಗಾದೇವಿ ದೇವಸ್ಥಾನ, ಅಂಚೆ ಇಲಾಖೆ ಹತ್ತಿರ, ಎನ್‌ಜಿಒ ಕ್ವಾರ್ಟರ್ಸ್ ಮತ್ತು ಪೊಲೀಸ್ ಕ್ವಾರ್ಟರ್ಸ್, ಬಸವೇಶ್ವರ ನಗರದ ದೇವಸ್ಥಾನಗಳಲ್ಲಿನ ಕಲ್ಲು ನಾಗರ ದೇವರಿಗೆ ಮತ್ತು ಹುತ್ತುಗಳಿಗೆ ಹಾಲು, ಬೆಲ್ಲದೊಂದಿಗೆ ವೈವಿಧ್ಯಮಯ ಸಿಹಿ ತಿಂಡಿಗಳನ್ನು ಎಡೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.