ಮಂಡ್ಯ: ರೈತರು ಸರಬರಾಜು ಮಾಡಿದ ಟನ್ ಕಬ್ಬಿನ 400 ಬಾಕಿ ಹಣ ಪಾವತಿ ಮಾಡದಿದ್ದರೆ ಜ.24 ರಂದು ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸುವುದಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ರೈತ ಸಂಘ ಅಧ್ಯಕ್ಷ ಕೀಳಘಟ್ಟ ನಂಜುಂಡಯ್ಯ ಎಚ್ಚರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಸಕ್ತ ಸಾಲಿಗೆ ಟನ್ ಕಬ್ಬಿಗೆ 2400 ನಿಗದಿಯಾಗಿದ್ದರೂ ಕಳೆದ ಜೂನ್‌ನಿಂದ ಡಿಸೆಂಬರ್‌ವರೆಗೆ 2 ಸಾವಿರ ರು.ಗಳನ್ನು ಪಾವತಿಸಲಾಗಿದೆ. ಉಳಿದ 400 ರು.ಗಳನ್ನು ಜನವರಿಯಿಂದ ಪ್ರಾರಂಭಿಸಿ ಆಗಸ್ಟ್ ಅಂತ್ಯದೊಳಗೆ ಮುಗಿಸುವುದಾಗಿ ಆಡಳಿತ ಮಂಡಳಿ ರೈತಸಂಘದ ಮುಖಂಡರಿಗೆ ಭರವಸೆ ನೀಡಿ ಅದರಂತೆ ನಡೆದುಕೊಂಡಿಲ್ಲ ಎಂದು ದೂರಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಕೊಂಡಿರುವಂತೆ ಬಾಕಿ 20 ಕೋಟಿಯನ್ನು ಬಟಾವಾಡೆ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಜ.24 ರಂದು ಕಾರ್ಖಾನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.