ಸೋಮವಾರ ಜಿಲ್ಲಾ ಕೇಂದ್ರದಲ್ಲಿ ಮಂಡ್ಯದಲ್ಲಿ ಜಿಲ್ಲಾಡಳಿತ ಕೆಲಸ ಕಾರ್ಯಗಳೆಲ್ಲವೂ ಸ್ತಬ್ಧ. ಏಕೆಂದರೆ ಜಿಲ್ಲಾಮಟ್ಟದ ಹಾಗೂ ಅಕ್ಕ- ಪಕ್ಕದ ತಾಲೂಕಿನ ಎಲ್ಲಾ ಅಧಿಕಾರಿಗಳು ದಂಡು ಚುಂಚನಗಿರಿಯಲ್ಲಿ ಬೀಡು ಬಿಟ್ಟಿದ್ದು ಕಂಡು ಬಂದಿತು.
ಸಂತ ಸಂಗಮದಲ್ಲಿ ಪಾಲ್ಗೊಂಡಿದ್ದ ಬಾಬಾ ರಾಮದೇವ್, ರವಿ ಶಂಕರ್ ಗುರೂಜಿ, ಗಣಪತಿ ಸಚ್ಚಿದಾನಂದ ಶ್ರೀಗಳು ತಮ್ಮ ತಮ್ಮ ಆಶೀರ್ವಚನ ಮುಗಿಸಿಕೊಂಡು ತಕ್ಷಣವೇ ಹೊರಟು ಹೋದರು.
ಸಂತ ಸಂಗಮದ ವೇದಿಕೆಯಲ್ಲಿ ಬಹು ಮುಖ್ಯವಾಗಿ ಸಾಧು, ಸಂತರಿಗೆ, ಮಠಾಧೀಪತಿಗಳಿಗೆ, ಉತ್ತರ ಭಾರತ ಮುನಿಗಳಿಗೆ, ಜೋಗಿ ಜಂಗಮರಿಗೆ ಹೆಚ್ಚಿನ ಆದ್ಯತೆ ಗೌರವ ನೀಡಲಾಗಿತ್ತು.
ನೂರಾರು ಸಾಧು, ಸಂತರಿಗೆ ಎಲೆ ಹಾಕಿ ಭೋಜನಕ್ಕೆ ಕುಳ್ಳಿರಿಸಲಾಯಿತು. ಅದಕ್ಕೂ ಮುನ್ನ ನೂತನ ಪೀಠಾಧಿಪತಿ ನಿರ್ಮಲಾನಂದನಾಥರು ಮಹದೇಶ್ವರನ ಹೆಸರಿನಲ್ಲಿ ಶ್ರೀಗಳ ಪೂಜೆ ಸಲ್ಲಿಸಿದ ನಂತರವೇ ಊಟಕ್ಕೆ ಬಡಿಸಲಾಯಿತು.
ಆದಿಚುಂಚನಗಿರಿ ಬೆಟ್ಟದ ಕೆಳ ಭಾಗದಲ್ಲಿ ಶಿವೈಕ್ಯ ಆದಿಶ್ರೀಗಳ ಭಾವ ಚಿತ್ರ ಪ್ರದರ್ಶನವನ್ನು ಭಕ್ತರಿಗಾಗಿ ಏರ್ಪಾಡು ಮಾಡಲಾಗಿತ್ತು.
ಸಂತ ಸಂಗಮ ಕಾರ್ಯಕ್ರಮ ಸಾಕಷ್ಟು ಪೂರ್ವಯೋಜಿತವಾಗಿತ್ತು ಮತ್ತು ವ್ಯವಸ್ಥಿತವಾಗಿತ್ತು. ವೇದಿಕೆಯಲ್ಲಿ ಸಂತರು ಮಾತನಾಡುತ್ತಾರೆಂದು ಹೇಳದ ಕೂಡಲೇ ಮೈಕ್ ಕೊಡುವವರೇ ಕಾಣುತ್ತಿರಲಿಲ್ಲ.
ಗಾಯಕ ಶಂಕರ ಶಾನಭಾಗ್ ಮತ್ತು ನಂದಿನಿರಾವ್ ತಂಡದಿಂದ ಭಾವ- ಭಕ್ತಿ ನಮನ ಸಂಗೀತ ಕಾರ್ಯಕ್ರಮ ಸುಶ್ರಾವ್ಯವಾಗಿತ್ತು.
ಆದಿಶ್ರೀಗಳ ಸಮಾಧಿಗೆ ಭೇಟಿ ನೀಡಿದ ಭಕ್ತರು ಕೆಲವರು ಕಣ್ಣೀರು ಹಾಕಿದರೆ, ಮತ್ತೆ ಕೆಲವರು ಜಾನಪದ ಗೀತೆಗಳನ್ನು ಗುನುಗುನಿಸುತ್ತಿದ್ದರು. ಸಮಾಧಿಯ ಮುಂಭಾಗ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಭಕ್ತರ ಮನಸೆಳೆದವು.