ಕ.ಪ್ರ.ವಾರ್ತೆ ನಾಗಮಂಗಲ ಮಾ.29
ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರ ಸ್ಪರ್ಧೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಬಾಲವಿಕಾಸ ಅಕಾಡೆಮಿ ಸದಸ್ಯ ದೇವರಾಜ್ ಹೇಳಿದರು.
ತಾಲೂಕಿನ ದೇವಲಾಪುರ ಹೋಬಳಿ ಮಾಟನಕೊಪ್ಪಲು ಗ್ರಾಮದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ಸ್ಟೆಪ್ ಯೋಜನೆ ಅಡಿಯಲ್ಲಿ ಮಂಡ್ಯದ ಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಮೂರು ದಿನಗಳ ಮಹಿಳಾ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರ ಮೇಲೆ ಹೆಚ್ಚಾಗಿರುವ ಅತ್ಯಾಚಾರ, ಭ್ರೂಣಹತ್ಯೆ, ಲೈಂಗಿಕ ಕಿರುಕುಳ, ಕೊಲೆ, ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಮಹಿಳೆಯರ ಸ್ಥಾನಮಾನ ಕುಸಿದಿದ್ದು, ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಆಗಬೇಕಾಗಿದೆ ಎಂದರು.
ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿವೆ. ಮಹಿಳೆಯರಿಗೆ ರಾಜಕೀಯ ಸ್ಥಾನಮಾನ, ಅಧಿಕಾರ ದೊರೆತಾಗ ಮಾತ್ರ ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಸಂಘಟಿತ ಹೋರಾಟ ಮಾಡಲು ಸಾಧ್ಯ ಎಂದು ಹೇಳಿದರು.
ಹೆಣ್ಣು ಭ್ರೂಣ ಹತ್ಯೆಯಿಂದ ಪ್ರಜ್ಞಾವಂತರಿರುವ ಮಂಡ್ಯ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದ್ದು, ಹೆಣ್ಣು ಗಂಡಿನ ಅನುಪಾತದಲ್ಲಿ ಸಮಾನತೆ ಕಾಯ್ದುಕೊಳ್ಳದೆ ಇದ್ದಲ್ಲಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೆ ಮಹಿಳೆಯರ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ ಎಂದು ತಿಳಿಸಿದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಮಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯಕ್ರಮ ಸಂಯೋಜಕ ಶಿವಕುಮಾರ್, ಗ್ರಾಮದ ಮುಖಂಡ ಗಂಗಾಧರಯ್ಯ, ಸಂಘದ ನಿರ್ದೇಶಕರಾದ ಲಕ್ಷ್ಮೀದೇವಿ, ತಾಯಮ್ಮ, ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ನಿಂಗಮ್ಮ, ಲಕ್ಷ್ಮಮ್ಮ ಉಪಸ್ಥಿತರಿದ್ದರು.