ಮಂಡ್ಯ: ಐದು ವರ್ಷದ ಮಕ್ಕಳ ಮರಣದಲ್ಲಿ ಶೇ.11 ರಷ್ಟು ಸಾವುಗಳು ಅತಿಸಾರ ಭೇದಿಯಿಂದ ಉಂಟಾಗುತ್ತಿದೆ. ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣ ಆರೋಗ್ಯ ಅಧಿಕಾರಿ ಡಾ.ಎಂ.ಎನ್. ಗೀತಾ ತಿಳಿಸಿದರು.
ಜಿಲ್ಲಾದ್ಯಂತ ಆ. 8 ರವರೆಗೆ ಹಮ್ಮಿಕೊಂಡಿರುವ ಅತಿ ಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಆಚರಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಗೀತಾ, ಓಆರ್ ಎಸ್ ದ್ರಾವಣ ಮತ್ತು ಜಿಂಕ್ ಸಿರಪ್ ಹಾಗೂ ಸೂಕ್ತವಾದ ಆಹಾರ ಪದಾರ್ಥ ನೀಡುವುದು, ಶುದ್ಧವಾದ ಕುಡಿಯುವ ನೀರು, ಎದೆ ಹಾಲು, ಊಟಕ್ಕೆ ಮುನ್ನ ಹಾಗೂ ಶೌಚಾಲಯದ ಬಳಕೆ ನಂತರ ಕೈಗಳನ್ನು ತೊಳೆಯುವುದರಿಂದ ಬೇಧಿ ತಡೆಯುವ ಸರಳ ವಿಧಾನಗಳು ಎಂದು ಸಲಹೆ ನೀಡಿದರು. ಪಾಕ್ಷಿಕದ ಅಂಗವಾಗಿ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಐದು ವರ್ಷಗಳ ಒಳಗಿನ ಮಕ್ಕಳಿರುವ ಪ್ರತಿ ಮನೆಗೂ ಅತಿಸಾರ ನಿಯಂತ್ರಣಕ್ಕೆಂದು ಒಆರ್ಎಸ್ ಪೊಟ್ಟಣ ನೀಡಿ ಅದರ ದ್ರಾವಣ ತಯಾರಿಸುವುದನ್ನು ತಿಳಿಸಿಕೊಡುವರು ಹಾಗೂ ಪ್ರಾರಂಭದಿಂದ 14 ದಿನಗಳವರೆಗೂ ಜಿಂಕ್ ಸಿರಪ್ ನಿರಂತರ ತಪ್ಪದೆ ಕೊಡುವಂತೆ ಮಾಹಿತಿ ನೀಡುವರು ಎಂದರು.
ಎರಡನೆ ಹಂತದಲ್ಲಿ ಆ.4 ರಿಂದ 8ರ ವರೆಗೆ ಆಶಾ ಕಾರ್ಯಕರ್ತಯರು ಐದು ವರ್ಷದೊಳಗಿನ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಆಯಾ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶಿಶು ಮತ್ತು ಎಳೆಯ ಮಕ್ಕಳಲ್ಲಿ ಆಹಾರ ಪದ್ಧತಿಯ ಬಗ್ಗೆ ಸಮಾಲೋಚಿನೆ ನಡೆಸಿ ವೈದ್ಯಕೀಯ ಚಿಕಿತ್ಸ ನೀಡಲಾಗುವುದು, ಅಗತ್ಯವಿದ್ದಲ್ಲಿ ಮೇಲ್ಮಟ್ಟದ ಸಂಸ್ಥೆಗಳಿಗೆ ನಿರ್ದೇಶಿಸಲಾಗುವುದು ಎಂದು ವಿವರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಅತಿಸಾರ ಭೇದಿಯಿಂದ ಬಳಲುತ್ತಲಿರುವ ಮಕ್ಕಳ ಚಿಕಿತ್ಸೆಗಾಗಿ ಡಯಾರಿಯಾ ವಾರ್ಡನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಜೆ.ಮಹೇಂದ್ರ, ಡಾ. ರೋಚನಾ, ತಿಮ್ಮಣ್ಣ, ಸೇರಿದಂತೆ ಇತರೆ ಆರೋಗ್ಯಾಧಿಕಾರಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.
ಜಾಗೃತಿ ಜಾಥಾ: ಈ ಕಾರ್ಯಕ್ರಮದ ನಂತರ ನಗರದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಜಿಲ್ಲಾಸ್ಪತ್ರೆಯವೆರೆಗೆ ಶಾಲಾ - ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಕಾರ್ಯಕತೆಯರು ಜಾಥದಲ್ಲಿ ತೆರಳಿ ಓಆರ್ಎಸ್ ಸುರಕ್ಷೆ ಮಗುವಿಗೆ ಶ್ರೀರಕ್ಷೆ, ಜಿಂಕ್ ಶಕ್ತಿ ಭೇದಿಯಿಂದ ಮುಕ್ತಿ, ಓಆರ್ಎಸ್ ಪಾನಕ ಅತಿಸಾರಕ್ಕೆ ಮಾರಕ, ಜೋಡಿ ನಂ.1 ಒಆರ್ಎಸ್ ಮತ್ತು ಜಿಂಕ್, ಓಆರ್ಎಸ್ ಜೀವ ಜಲ ಮಗು ನಗುವುದು ಕಿಲ ಕಿಲ, ಅತಿಸಾರ ಭೇದಿಯಿಂದ ಸಾವು ಶೂನ್ಯ ಎಂಬ ಘೋಷ ವಾಕ್ಯಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.