ಮಂಡ್ಯ: ಕರ್ನಾಟಕದಲ್ಲಿ ನೆಲೆಸಿರುವ ಅನ್ಯ ಭಾಷಿಗರು ಕನ್ನಡ ನೆಲ, ಜಲ ಮತ್ತು ಭಾಷೆಯ ಬಗೆಗೆ ಅಭಿಮಾನ ಹೊಂದಬೇಕು. ಇಲ್ಲಿಯ ಋಣ ತೀರಿಸಲು ಕನ್ನಡವನ್ನು ಕಲಿಯಬೇಕು. ಅನ್ಯ ಭಾಷೆಯಲ್ಲಿ ಮಾತನಾಡದೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ದೀಕ್ಷೆ ತೊಡಬೇಕು ಎಂದು ನಾಲ್ಕನೇ ಚುಟುಕು ಸಮ್ಮೇಳನಾಧ್ಯಕ್ಷ ಕೃಷ್ಣ ಸ್ವರ್ಣಸಂದ್ರ ಕರೆ ನೀಡಿದರು.
ನಗರದ ಕಲಾಮಂದಿರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೀಯ ಭಾಷಣ ಮಾಡಿದ ಕೃಷ್ಣ, ಅನ್ಯಭಾಷಿಗರು ಮತ್ತು ಕನ್ನಡಿಗರು ತನ್ನ ಹೆತ್ತ ತಾಯಿಯ ಕರುಳು ಸಂಬಂಧದಂತೆ ನೆಲ, ಜಲ, ಭಾಷೆಯಾಗಬೇಕು. ತಾಯಿಯನ್ನು ಪ್ರೀತಿಸುವಂತೆ ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ದುರಂತ: ಭಾಷಾವಾರು ಪ್ರದೇಶದ ಆಧಾರದ ಮೇಲೆ ಅಖಂಡ ಕರ್ನಾಟಕ ಅಸ್ತಿತ್ವಗೊಂಡಿತು. ಆದರೆ, ಅತ್ತ ಮಹಾರಾಷ್ಟ್ರದವರು ಬೆಳಗಾವಿಗಾಗಿ ನಿತ್ಯ ಕ್ಯಾತೆ ತೆಗೆಯುತ್ತಿದ್ದಾರೆ. ಗಡಿ ಸಮಸ್ಯೆ ತಾಂಡವವಾಡುತ್ತಿದೆ. ಗೋವಾ ರಾಜ್ಯದಲ್ಲಿ ಕನ್ನಡಿಗರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದು ದುರಂತದ ಸಂಗತಿ.
ಕರುನಾಡು ಎಲ್ಲಾ ಭಾಷೆಗಳನ್ನು ಕೈ ಬೀಸಿ ಕರೆಯುತ್ತದೆ. ಜಲ, ನೆಲವನ್ನು ನೀಡಿ ಬದುಕು ಕಲ್ಪಿಸುತ್ತದೆ. ಆದರೆ, ಇಲ್ಲಿ ವಾಸಿಸುವ ಅನ್ಯ ಭಾಷಿಗರಿಗೆ ನೆಲ, ಜಲ ಬೇಕಾಗಿದೆಯೇ ಹೊರತು ಭಾಷೆ - ಸಂಸ್ಕೃತಿ ಬಗ್ಗೆ ಎಳ್ಳಷ್ಟು ಅಭಿಮಾನ ಇಲ್ಲವಾಗಿದೆ.
ಅನ್ಯಭಾಷಿಗರೂ ಕನ್ನಡದ ಬಗ್ಗೆ ಅಭಿಮಾನ ಹೊಂದುವಂತೆ ಪರಿವರ್ತನೆ ಮಾಡಬೇಕಾಗಿದೆ ಎಂದರು. ಕನ್ನಡಿಗರಾದ ನಾವು ಹಿಂದಿನಿಂದ ಬರುವ ಹಿಂದಿ ಭಾಷೆ, ಮುಂದಿನಿಂದ ಬರುವ ಇಂಗ್ಲಿಷ್ ಭಾಷೆಯ ಬಗ್ಗೆ ಎಚ್ಚರ ವಹಿಸಬೇಕು. ಕನ್ನಡ ಭಾಷೆಯನ್ನು ಉಳಿಸಲು ಬೆಳೆಸಲು ದೀಕ್ಷೆ ತೊಡಬೇಕು. ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನು ಬಿಟ್ಟು ಅಪ್ಪ - ಅಮ್ಮ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಸಿ: ಪೋಷಕರು ಮಕ್ಕಳನ್ನು ಇಂಗ್ಲಿಷ್ ಕಲಿಯುವಂತೆ ಒತ್ತಡ ಹೇರುವ ಬದಲು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಸಿ. ಇಂಗ್ಲಿಷ್ ಕಲಿತು ದೇಶ ಆಳುವುದು ಬೇಡ. ಮಾತೃ ಭಾಷೆ ಕಲಿತು ದೇಶೀಯತೆ ಆಳೋಣ. ಇತರೆ ಭಾಷೆಯನ್ನು ದ್ವೇಷಿಸುವುದು ಬೇಡ. ನೆಂಟರಂತೆ ಸತ್ಕರಿಸೋಣ. ಶಿಕ್ಷಣೋದ್ಯಮವಾಗಿ ಪರಿವರ್ತನೆಯಾಗಿರುವ ಶಿಕ್ಷಣ ಪದ್ಧತಿಯು ಬದಲಾವಣೆಯಾಗಬೇಕು ಎಂದರು.
ಸಾಹಿತಿ ಡಾ.ಎಂ.ಜಿ.ಆರ್.ಅರಸ್ ಸಮ್ಮೇಳನ ಉದ್ಘಾಟಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ ಮತ್ತು ತಾಲೂಕು ಪಂಚಾಯ್ತಿ ಅಧ್ಯಕ್ಷ ಟಿ. ಶಂಕರೇಗೌಡ ಪುಸ್ತಕ ಬಿಡುಗಡೆ ಮಾಡಿದರು. ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ವಿ.ನಾಗರಾಜು, ನಗರಸಭೆ ಸದಸ್ಯ ಎಸ್.ಕೆ. ಶಿವಪ್ರಕಾಶ್ ಬಾಬು, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ. ಲೋಕೇಶ್, ರತ್ನ ಹಾಲಪ್ಪಗೌಡ ಉಪಸ್ಥಿತರಿದ್ದರು.