ನಾಗಮಂಗಲ: ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತ್ತದಿಂದ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ನೇತೃತ್ವದಲ್ಲಿ ಮೆರವಣಿಗೆ ಹೊರಟ ಮಹಿಳೆಯರು ಶ್ರೀರಂಗಪಟ್ಟಣ - ಬೀದರ್ ಹೆದ್ದಾರಿ ಮಾರ್ಗವಾಗಿ ಮಂಡ್ಯ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ರಾಜ್ಯದೆಲ್ಲೆಡೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಅಮಾನವೀಯ ಕೃತ್ಯವಾಗಿದೆ. ಪುರುಷ ಸಮಾನವಾಗಿ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿರುವ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ.
ಶಾಲೆಗೆ ಹೋಗುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಲೈಂಗಿಕ ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನಂತರ ಮಿನಿವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು ಶಿರಸ್ತೆದಾರ್ ಕೃಷ್ಣವೇಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಚಾಮಲಾಪುರ ಯಶೋಧಮ್ಮ, ಕಾರ್ಯದರ್ಶಿ ಕಮಲಮ್ಮ, ಗಂಗಾ, ಕಮಲ, ಜಯಲಕ್ಷ್ಮಿ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕಿ ಚಿಕ್ಕಮ್ಮ, ದೇವೀರಮ್ಮ, ಸುಧಾ, ನಾಗಮ್ಮ, ಸಾವಿತ್ರಿ, ಭಾಗ್ಯ ಭಾಗವಹಿಸಿದ್ದರು.