ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ಭರ್ತಿಯಾದರೆ ರೈತರು ಮತ್ತು ತಮಿಳುನಾಡಿಗೆ ಯಾವುದೇ ಸಮಸ್ಯೆ ಉದ್ಭವ ಆಗುವುದಿಲ್ಲ. ಆ ವರುಣಾ ದೇವ ಸದಾ ಕಾಲ ಹೀಗೆಯೇ ದಯೇ ತೋರುತ್ತಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರ್ಥಿಸಿದರು. ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗೀನ ಅರ್ಪಿಸಿದ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಜಲಾಶಯ ಎಲ್ಲಿ ಭರ್ತಿ ಆಗುವುದಿಲ್ಲವೋ ಎಂಬ ಆತಂಕ ಮನದಲ್ಲಿತ್ತು. ಆದರೆ, ವರುಣದೇವನ ಕೃಪೆಯಿಂದ ಎಲ್ಲಾ ಆತಂಕ ನಿವಾರಣೆಯಾಗಿದೆ ಎಂದರು. ಈ ವರ್ಷವೂ ಉತ್ತಮವಾಗಿ ಮಳೆಯಾಗುತ್ತದೆ ಎಂಬ ಆಶಾಭಾವನೆ ನನ್ನಲ್ಲಿದೆ. ಅಣೆಕಟ್ಟೆ ಹೀಗೆಯೇ ಭರ್ತಿಯಾಗುತ್ತಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕಳೆದ ವರ್ಷ ತಮಿಳುನಾಡಿಗೆ ಕಾವೇರಿ ನ್ಯಾಯಮಂಡಳಿ ಆದೇಶಕ್ಕಿಂತ 68 ಟಿಎಂಸಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.