ಮದ್ದೂರು: ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ವಿದೇಶಾಂಗ ಖಾತೆ ಮಾಜಿ ಸಚಿವ ಎಸ್.ಎಂ.ಕೃಷ್ಣ ಬುಧವಾರ ಹೇಳಿದರು.
ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿಕಾರಿಪುರ, ಚಿಕ್ಕೋಡಿ ಹಾಗೂ ಬಳ್ಳಾರಿ ಗ್ರಾಮೀಣ ಭಾಗದಲ್ಲಿ ಕ್ಷೇತ್ರಗಳ ಶಾಸಕರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಈಗಾಗಲೇ ಪ್ರದೇಶ ಕಾಂಗ್ರೆಸ್ ಸಮಿತಿ ಸಿದ್ಧತೆ ನಡೆಸಿದೆ ಎಂದರು.
ಉಪಚುನಾವಣೆಯಲ್ಲಿ ಪ್ರಚಾರ ನಡೆಸುವ ಕುರಿತು ನಾನು ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪಕ್ಷದ ಹೈಕಮಾಂಡ್ ಒಂದು ವೇಳೆ ಚುನಾವಣ ಪ್ರಚಾರಕ್ಕೆ ಆಹ್ವಾನ ನೀಡಿದಲ್ಲಿ ಮುಂದೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಕೃಷ್ಣ ಹೇಳಿದರು.
ಇದಕ್ಕೂ ಮುನ್ನ ಖಾಸಗಿ ಹೊಟೇಲ್ನಲ್ಲಿ ತಹಸೀಲ್ದಾರ್ ಮಂಜೇಗೌಡ ಅವರಿಂದ ಜಿಲ್ಲೆಯ ಮಳೆ ಪರಿಸ್ಥಿತಿಯ ಬಗ್ಗೆ ಕೃಷ್ಣ ಮಾಹಿತಿ ಪಡೆದುಕೊಂಡರು. ರೈತರು ಕೇವಲ ಕಬ್ಬು ಅಥವಾ ಭತ್ತದ ಬೆಳೆಗೆ ಮಾತ್ರ ಪ್ರಧಾನ್ಯತೆ ನೀಡದೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ನಂತರ ಪಟ್ಟಣದ ಪುರಾಣ ಪ್ರಸಿದ್ಧ ಹೊಳೆ ಆಜಂನೇಯ ಸ್ವಾಮಿ ದೇವಾಲಯಕ್ಕೆ ಭೇಟಿನೀಡಿದ ಕೃಷ್ಣ ಅವರು ವಿಶೇಷ ಪೂಜೆ ಸಲ್ಲಿಸಿದರು.
ಕೆ.ಪಿ.ಸಿ.ಸಿ ಸದಸ್ಯ ಎಸ್. ಗುರುಚರಣ್, ಟಿ.ಎಸ್.ಸತ್ಯಾನಂದ, ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ನಿರ್ದೇಶಕ ಕುದುರಗುಂಡಿ ಉಮೇಶ್, ಕಾರ್ಯನಿರ್ವಾಹಕ ಅಧಿಕಾರಿ ಡಾ.ಸ್ವಾಮಿ ,ತಾ.ಪಂ ಅಧ್ಯಕ್ಷ ಸಿ.ನಾಗೇಗೌಡ, ಉಪಾಧ್ಯಕ್ಷೆ ಗಂಗಾಬಲರಾಮು, ಸದಸ್ಯರಾದ ಪಿ.ಸಂದರ್ಶ, ಕೆ.ಆರ್.ಮಹೇಶ್, ಸಿ.ಸಿ.ಮಹೇಶ್, ರಘು, ಹೂತಗೆರೆ ಪ್ರಸನ್ನ, ಎಂ.ಸಿ.ಚಂದ್ರಶೇಖರ್ ಇದ್ದರು.