ಮದ್ದೂರು: ವಿದ್ಯಾರ್ಥಿ ಜೀವನದಲ್ಲಿ ರ್ಯಾಂಕ್ಗಳಿಕೆಯೇ ಮುಖ್ಯ ಉದ್ಧೇಶವಾಗಬಾರದು ಎಂದು ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ನಡೆದ ಪತ್ರಿಕಾ ವರದಿಗಾರರ ಸಂಘ ಹಾಗೂ ಚಿರ ಪೌಂಡೇಷನ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಢಿದರು. ಇಂದು ಮಕ್ಕಳು ಅಂಕ ಗಳಿಸುವುದನ್ನೇ ಮುಖ್ಯ ಉದ್ಧೇಶವನ್ನಾಗಿಸಿಕೊಂಡಿದ್ದು, ಕಡಿಮೆ ಅಂಕ ಬಂದರೆ ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಇದು ಸರಿಯಲ್ಲ. ನೈತಿಕ ಸ್ಥೈರ್ಯ ಬೆಳಸುವುದು ಶಿಕ್ಷಣದ ಗುರಿಯಾಗಬೇಕು ಎಂದರು.
ನೆರವಾಗಿದ್ದೇನೆ: ನನ್ನ ತಂದೆ, ತಾಯಿ ಶಿಕ್ಷಣದ ಬಗೆಯ ಗೌರವ ಕಾಳಜಿ ಹೊಂದಿದ್ದರು. ಇದರ ಪ್ರಭಾವದಿಂದ ನಾನು ಭಾರತೀನಗರದಲ್ಲಿ ಸರ್ಕಾರಿ ಶಾಲೆಗೆ ಭೂಮಿ ನೀಡಿ, ಕಟ್ಟಡವನ್ನು ಕಟ್ಟಿಸಿಕೊಟ್ಟು ಸಾವಿರಾರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ಈ ಸೇವೆಯಲ್ಲಿ ನನಗೆ ಯಾವುದೇ ರಾಜಕೀಯ ಉದ್ದೇಶವಾಗಲಿ, ಪ್ರಚಾರದ ಉದ್ದೇಶವಾಗಲಿ ಇಲ್ಲ ಎಂದರು.
ಸಂಸದ ಸಿ.ಎಸ್.ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿ, ಪತ್ರಕರ್ತರು ಕೇವಲ ಪತ್ರಿಕಾ ಕೆಲಸಕ್ಕೆ ಮಾತ್ರ ಸೀಮಿತರಾಗದೇ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಸಂಗತಿ. ಪತ್ರಕರ್ತರು ತಮ್ಮ ಬಿಡುವಿಲ್ಲದ ದಿನಚರಿಯಲ್ಲೂ ಸಾಮಾಜಿಕ ಸೇವಾ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಮೇಲಿರುವ ಗೌರವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಮಾತನಾಡಿ, ಪತ್ರಿಕೆಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಭಾವಶಾಲಿ ಮಾಧ್ಯಮ. ಪತ್ರಕರ್ತರು ಮನಸ್ಸು ಮಾಡಿದರೆ ಯಾವುದೇ ಕೆಲಸವೂ ಅಸಾಧ್ಯವೇನಲ್ಲ. ಪತ್ರಿಕಾಭವನ ನಿರ್ಮಾಣಕ್ಕೆ ಮುಂದಾದರೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಬದ್ಧ ಎಂದರು.
ಸನ್ಮಾನ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತಿಕೆರೆ ಜಯರಾಂ, ಉಪನ್ಯಾಸಕ ದೊಡ್ಡಬೋರಯ್ಯ ಪತ್ರಕರ್ತರ ಜವಾಬ್ಧಾರಿ ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತ, ಕನ್ನಡಪ್ರಭ ಪ್ರಧಾನ ವರದಿಗಾರ ಕೆ.ಎನ್.ರವಿ, ಪ್ರೌಢಶಾಲಾ ಶಿಕ್ಷಕ, ಪತ್ರಕರ್ತ ಬಿ.ಎಲ್.ಮಧುಸೂದನ, ಪತ್ರಿಕಾ ವಿತರಕ ಕಾಂತರಾಜು ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಅಣ್ಣೂರು ಸತೀಶ ಪ್ರಾಸ್ತಾವಿಕ ನುಡಿಯನ್ನಾಡಿದರು. ಬೆಸ್ಕಾಂ ಜಾಗೃತದಳದ ಪೊಲೀಸ್ ಅಧೀಕ್ಷಕ ಎ.ಎನ್. ಪ್ರಕಾಶಗೌಡ ಮಾತಾನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಕಾರ್ಯದಶಿ ಬಿ.ಪಿ.ಪ್ರಕಾಶ್, ಜಿಪಂ ಸದಸ್ಯೆ ಲಲಿತಾ ಪ್ರಕಾಶ, ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ, ಸಾಮಾಜಿಕ ಕಾರ್ಯಕರ್ತರಾದ ಮಹೇಂದ್ರ ಸಿಂಗಾಳಪ್ಪ, ಶ್ಯಾಂ ಸುಂದರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದೇವೇಗೌಡ, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ರವೀಶ, ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಶಿವರಾಮು, ಸಂಘದ ಉಪಾಧ್ಯಕ್ಷ ಎಂ.ಪಿ.ವೆಂಕಟೇಶ್, ಗೌರವಾಧ್ಯಕ್ಷ ಅಣ್ಣೂರು ಲಕ್ಷ್ಮಣ, ಕಾರ್ಯದರ್ಶಿ ಅಂಬರಹಳ್ಳಿಸ್ವಾಮಿ, ನಿರ್ದೇಶಕರಾದ ರವಿ ಸಾವಂದಿಪುರ, ಚಾಮನಹಳ್ಳಿ ಮಂಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.