ಕೆ.ಆರ್.ಪೇಟೆ: ಕ್ರೀಡೆ ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಜೀವಿನಿ ಮಾತ್ರವಲ್ಲದೇ ಮಾನಸಿಕ ಸದೃಢತೆಗೆ ಸಹಕಾರಿಯಾಗಿದೆ ಎಂದು ಜಿಪಂ ಸದಸ್ಯೆ ಅನುಸೂಯ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಸಬಾ ಹೋಬಳಿಯ 2ನೇ ವೃತ್ತದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅನುಸೂಯ, ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು ತಿಳಿಸಿದರು. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ವರದಾನವಾಗಿದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಆಟೋಟಗಳನ್ನು ಮೈಗೂಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗುವ ಮೂಲಕ ದೇಶದ ಕೀರ್ತಿಯನ್ನು ಬೆಳಗಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು. ಪುರಸಭೆ ಅಧ್ಯಕ್ಷ ಕೆ. ಗೌಸ್ಖಾನ್ ಮಾತನಾಡಿ, ಕ್ರೀಡೆಯು ಯುವಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ವಿಕಸಿತಗೊಳಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸತತವಾದ ಅಭ್ಯಾಸ ನಡೆಸಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಧೃಡಸಂಕಲ್ಪ ಮಾಡಬೇಕು ಎಂದು ಹೇಳಿದರು. ಜಿ.ಬಿ.ರಾಮಪ್ಪ, ಸಿ.ಕೆ.ಶಿವರಾಮೇಗೌಡ, ಎಚ್.ಎನ್.ಚಂದ್ರಶೇಖರ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ನಾಗರಾಜು ಭಾಗವಹಿಸಿದ್ದರು.