ಮಂಡ್ಯ: ಸನಾತನ ಧರ್ಮವನ್ನು ಸಂಕುಚಿತ ಮನೋಭಾವದಿಂದ ನೋಡುವ ಬದಲು ವಿಶಾಲ ಮನೋಭಾವದಿಂದ ನೋಡುವಂತೆ ಮಾಜಿ ಸಚಿವ ಎಸ್.ಎಂ.ಕೃಷ್ಣ ಬುಧವಾರ ಸಲಹೆ ನೀಡಿದರು. ತಾಲೂಕಿನ ಮಾರದೇವನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಸರಸ್ವತಿ ಎಜುಕೇಷನ್ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಸಾಯಿ ಅನುಗ್ರಹಂ (ಶಿಕ್ಷಕರ ವಸತಿ ಗೃಹ)ನ್ನು ಉದ್ಘಾಟಿಸಿ ಮಾತನಾಡಿದ ಎಸ್.ಎಂ. ಕೃಷ್ಣ ಅವರು, ಸನಾತನ ಧರ್ಮ ಎಂದರೆ ಕೆಲವರಲ್ಲಿ ಸಂಕುಚಿತ ಮನೋಭಾವನೆ ಇದೆ. ಅದನ್ನು ಹೋಗಲಾಡಿಸಲು ಇಂತಹ ಶಿಕ್ಷಣ ಸಂಸ್ಥೆಗಳು ಅತ್ಯವಶ್ಯಕ ಎಂದರು. ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. ಆದರೆ, ಮಕ್ಕಳಿಗೆ ಸಂಸ್ಕೃತಿ, ಧರ್ಮ ಸಾರವನ್ನು ಪರಿಚಯಿಸುವ ಜತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಂತಹ ಸಂಸ್ಥೆಗಳು ವಿರಳ. ಸಾಯಿ ಬಾಬಾ ಸೇವಾ ಟ್ರಸ್ಟ್ ದೇಶ ಮಾತ್ರವಲ್ಲದೆ, ವಿಶ್ವದೆಲ್ಲೆಡೆ ಹಲವಾರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ನಿರ್ಮಿಸಿ ಬಡವರಿಗೆ ಹಲವಾರು ರೀತಿಯ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುದರ್ಶನ್ ಮಾತನಾಡಿದರು. ಇದೇ ವೇಳೆ ಶ್ರೀ ಸಾಯಿ ಅನುಗ್ರಹಂ ಕಟ್ಟಡದ ದಾನಿ ಲಂಡನ್ನ ದಂತ ವೈದ್ಯ ಡಾ.ಗಿರೀಶ್ ಮಲ್ಹೋತ್ರ ಅವರನ್ನು ಅಭಿನಂದಿಸಲಾಯಿತು