ಮಂಡ್ಯ

ಮಂಚಯ್ಯ ಸಂಸ್ಮರಣೆ

ಮಂಡ್ಯ: ಕೂಲಿ ಕಾರ್ಮಿಕರು ಹಾಗೂ ಸಾಮಾಜಿಕ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಸರ್ಕಾರಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಪ್ಪಾಜಯ್ಯ ತಿಳಿಸಿದರು. ನಗರದ ಗಾಂಧಿಭವನದಲ್ಲಿ ಅಹಿಂದ ವರ್ಗಗಳ ಪತ್ರಕರ್ತರ ವೇದಿಕೆ ಆಯೋಜಿಸಿದ್ದ ಹಿರಿಯ ಪತ್ರಿಕೋದ್ಯಮಿ ದಿವಂಗತ ಡಿ. ಮಂಚಯ್ಯರವರ 23ನೇ ವರ್ಷದ ಸಂಸ್ಮರಣ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದ ಒಳಿತಿಗಾಗಿ ಎಲೆಮರೆ ಕಾಯಿಯಂತೆ ದುಡಿಯುತ್ತಿರುವವರನ್ನು ಗುರುತಿಸಿ ಅಂತಹವರನ್ನು ಗೌರವಿಸಿ ಸತ್ಕಾರಿಸುವ ಕಾರ್ಯ ಆಗಬೇಕು.  ರಾಜಕೀಯ ಒತ್ತಡ ಹಾಗೂ ಇತರೆ ಪ್ರಭಾವಿ ವ್ಯಕ್ತಿಗಳ ಒತ್ತಡವನ್ನು ಬಿಟ್ಟು ನ್ಯಾಯಸಮ್ಮತವಾಗಿ ಸನ್ಮಾನಗಳು ಅರ್ಹರಿಗೆ ದೊರಕಬೇಕು ಎಂದು ಹೇಳಿದರು.
ಅರಸು ಸ್ವಾಭಿಮಾನಿ ಹಿಂದುಳಿದ ವರ್ಗಗಳ ವೇದಿಕೆಯ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಎಂ. ಹೊನ್ನೇಗೌಡ ಮಾತನಾಡಿ, ಅಂಬೇಡ್ಕರ್ ತಂದಿರುವ ಕಾನೂನು ಇಂದು ಶೋಷಿತ ವರ್ಗಕ್ಕೆ ತುಂಬಾ ಅನುಕೂಲವಾಗಿದೆ. ಹಿಂದೆ ಅನುಭವಿಸುತ್ತಿದ್ದಂತ ಶೋಷಣೆಯಿಂದ ಮುಕ್ತರಾಗಿದ್ದೇವೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಉನ್ನತೀಕರಣಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಆದಿವಾಸಿ ಕೂಲಿಕಾರ್ಮಿಕರ ರಕ್ಷಣಾ ಪರಿಷತ್, ಬೆಂಗಳೂರು ಅಧ್ಯಕ್ಷ ಎಂ.ನಾರಾಯಣ, ವೇದಿಕೆಯ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಎಂ. ನಾರಾಯಣ ಅವರನ್ನು ಅಭಿನಂದಿಸಲಾಯಿತು. ಎಂ.ಯೋಗಾನಂದ, ಬಸವರಾಜು, ಕೊಮ್ಮೇರಹಳ್ಳಿ ಕೃಷ್ಣಮೂರ್ತಿ, ಕೆಂಪೇಗೌಡ ಮತ್ತಿತರರು ಇದ್ದರು.
ಸಂಸ್ಕೃತದಿಂದ ಜ್ಞಾನ ವೃದ್ಧಿ
ನಾಗಮಂಗಲ:  ಸಂಸ್ಕೃತ ಶಿಕ್ಷಣ ಪಡೆದರೆ ವಿದೇಶಿಯರನ್ನು ಮೀರಿಸಬಹುದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ತಿಳಿಸಿದರು.
 ತಾಲೂಕಿನ ಆದಿಚುಂಚನಗಿರಿ ಆಧ್ಯಾತ್ಮಿಕ ಭವನದಲ್ಲಿ ರಾಜ್ಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಆದಿಚುಂಚನಗಿರಿ ಅನುದಾನಿತ ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಕಾಲೇಜಿನ ಸಹಯೋಗದೊಂದಿಗೆ  ನಡೆದ ಸಂಸ್ಕೃತ ಪಾಠಶಾಲೆಗಳ ಪ್ರಥಮ, ಕಾವ್ಯ, ಸಾಹಿತ್ಯ ತರಗತಿಗಳ ನೂತನ ಪಠ್ಯಕ್ರಮ ಪ್ರಶಿಕ್ಷಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳ ಹಿಂದಿನ ಕಾಲದಲ್ಲಿ ಸಂಸ್ಕೃತವು ಒಂದು ಜಾತಿಯ ಸ್ವತ್ತೆಂಬ ಭಾವನೆಯಿತ್ತು. ಶ್ರೀಮಠದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಸಮುದಾಯದವರೂ ಸಂಸ್ಕೃತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಭಾಷೆಗಳಿಗೂ ಮೂಲ ಸಂಸ್ಕೃತ ಭಾಷೆ. ನಮ್ಮ ದೇಶದ ಸಂಸ್ಕೃತಿ ಹಾಗೂ ಜ್ಞಾನವನ್ನು ನಾವು ಉಳಿಸಿಕೊಂಡರೆ ವಿದೇಶಿಯರ ಸಮನಾಗಿ ನಿಲ್ಲಬಹುದು ಎಂದರು.
ಸಂಸ್ಕೃತ ಅಭ್ಯಸಿಸಿ: ಪ್ರತಿಯೊಬ್ಬರು ತಮ್ಮ ಮಕ್ಕಳಲ್ಲಿ ಆಸಕ್ತಿ ಮೂಡುವಂತೆ ಸಂಸ್ಕೃತ ಪಾಠವನ್ನು ಅಭ್ಯಾಸ ಮಾಡಿಸಬೇಕು. ಸಂಸ್ಕೃತವನ್ನು ವಿಶ್ವಭಾಷೆಯನ್ನಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಜೊತೆಗೆ ಆಂಗ್ಲಭಾಷೆಯನ್ನೂ ಕಲಿಸಬೇಕು ಎಂದು ತಿಳಿಸಿದರು. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕಿ ಡಾ. ಎಚ್.ಪಿ.ದೇವಕಿ ಮಾತನಾಡಿ, ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಇದರ ಮಹತ್ವವನ್ನು ಹಳೆಗನ್ನಡ ಕವಿತೆಗಳಲ್ಲಿಯೂ ನಾವು ಕಾಣುತ್ತಿದ್ದೇವೆ. ಚರಕ ಸಂಹಿತೆ, ಸುಶ್ರುತ ಸಂಹಿತೆ ಇತ್ಯಾದಿಗಳೂ ಸಂಸ್ಕೃತದಲ್ಲಿಯೇ ಇವೆ ಎಂದರು.
 ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ವಿ. ಗಿರೀಶ್‌ಚಂದ್ರ, ಸಂಸ್ಕೃತ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ. ಶ್ರೀನಿವಾಸ ವರಖೇಡಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಚಾಲಕ ಡಾ. ಸಿ.ನಂಜುಂಡಯ್ಯ ಸ್ವಾಗತಿಸಿದರು. ಡಾ.ಮಧುಸೂದನ ಅಡಿಗ ನಿರೂಪಿಸಿದರು. ನಾಡಿನ 250ಕ್ಕೂ ಹೆಚ್ಚು ಪಾಠಶಾಲಾ ಶಿಕ್ಷಕರು ಪ್ರಶಿಕ್ಷಣ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.
 ಸಂಪನ್ಮೂಲ ತಜ್ಞರಾಗಿ ಸಂಸ್ಕೃತ ವಿದ್ವಾಂಸರಾದ ಸಿದ್ಧಗಂಗಾ ಮಠದ ಡಿ.ಎಸ್.ಚಂದ್ರಶೇಖರಯ್ಯ, ದೊಡ್ಡಬಳ್ಳಾಪುರದ ಶ್ರೀರಾಮಶರ್ಮ, ಆದಿಚುಂಚನಗಿರಿಯ ಎಚ್.ಎಂ.ನರಸಿಂಹಮೂರ್ತಿ, ಮಧುಸೂದನ ಅಡಿಗ ಕಾರ್ಯನಿರ್ವಹಿಸಿದರು.
ರಕ್ತದಾನದಿಂದ ಜೀವದಾನ
ಮಂಡ್ಯ: ರಕ್ತವನ್ನು ಯಾವುದೇ ವಸ್ತುವಿನಿಂದ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ತೊಂದರೆಯಲ್ಲಿ ಇರುವವರ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾ ಏಡ್ಸ್ ಮತ್ತು ಪ್ರತಿಬಂಧಕ ನಿಯಂತ್ರಣ ಅಧಿಕಾರಿ ಡಾ. ಶಶಿಕಲಾ ಹೇಳಿದರು.
ತಾಲೂಕಿನ ಯಲಿಯೂರು ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಯಲಿಯೂರು ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಚಾಲನೆ ನೀಡಿ ಮಾತನಾಡಿದರು.
18ರಿಂದ 60 ವರ್ಷ ವಯೋವುತಿಯ ಆರೋಗ್ಯವಂತ ಪುರುಷ ಹಾಗೂ ಮಹಿಳೆಯರು ರಕ್ತದಾನ ಮಾಡಬಹುದು. ಪುರುಷರು ಪ್ರತಿ ಮೂರು ತಿಂಗಳಿಗೆ ಹಾಗೂ ಮಹಿಳೆಯರು ಪ್ರತಿ 4 ತಿಂಗಳಿಗೆ ರಕ್ತದಾನ ಮಾಡಬಹುದು.
 ರಕ್ತದಾನದಿಂದ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ತೊಂದರೆ ಉಂಟಾಗುವುದಿಲ್ಲ ಎಂದು ಸಲಹೆ ನೀಡಿದರು.ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಮಾತನಾಡಿ, ಮಾನವ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಗರ್ಭಿಣಿಯರು, ಅಪಘಾತದಲ್ಲಿ ತೊಂದರೆಗೆ ಸಿಲುಕಿದವರು, ಕ್ಯಾನ್ಸರ್ ರೋಗಿಗಳು ಸೇರಿದಂತೆ ತೊಂದರೆಗೆ ಒಳಗಾದವರಿಗೆ ಅನುಕೂಲವಾಗಲಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶಂಕರ್, ರಾಜೇಶ್, ಯೋಗೇಶ್, ವಿನಾಯಕ್, ಮಹಾಲಕ್ಷ್ಮೀ, ಪುಷ್ಪಾ, ರಾಜ್‌ಕುಮಾರ್, ಶಿವಲಿಂಗು, ಕೃಷ್ಣ ಭಾಗವಹಿಸಿದ್ದರು. ಹಲವಾರು ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ಕ್ರೀಡಾಕೂಟ ಸ್ಪರ್ಧೆಯಿಂದ
ದೈಹಿಕ, ಮಾನಸಿಕ ಬೆಳವಣಿಗೆ
ಶ್ರೀರಂಗಪಟ್ಟಣ: ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನರಾಜು ಹೇಳಿದರು. ಪಟ್ಟಣದ ಪದವಿ ಪೂರ್ವ ಕಾಲೇಜು ಹಿಂಭಾಗದಲ್ಲಿರುವ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕೇಂಬ್ರಿಡ್ಜ್‌ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ   ಕಸಬಾ ನಗರ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು  ಉದ್ಘಾಟಿಸಿ ಅವರು  ಮಾತನಾಡಿದರು.ಮಕ್ಕಳು ಕ್ರಿಯಾಶೀಲವಾಗಿರಬೇಕಾದರೆ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇದರಿಂದ ಶಾರೀರಿಕ ಬೆಳವಣಿಗೆ ಮತ್ತು ಮನಸ್ಸಿನ ಚುರುಕುತನ ಹೆಚ್ಚುತ್ತದೆ. ನಂತರ ಪಾಠ ಪ್ರವಚನಗಳು ತಲೆಗೆ ಹೊಳೆಯುತ್ತದೆ. ಇದರಲ್ಲಿ ಆಸಕ್ತಿ ಮುಖ್ಯವಾಗಿರಬೇಕು ಎಂದು ತಿಳಿಸಿದರು.ಪುರಸಭಾ ಸದಸ್ಯ ನಂದೀಶ್ ಕ್ರೀಡಾ ಧ್ವಜಾಹರೋಣ ಮಾಡಿದರು. ನೌಕರರ  ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಲಿಂಗು, ಸಿಇಒ ವಸಂತ್‌ಕುಮಾರ್ ಕ್ರೀಡಾ ಪರಿವೀಕ್ಷಕ ಪರಮೇಶ್ವರಪ್ಪ ಭಾಗವಹಿಸಿದರು.
ರಂಗಣ್ಣನ ಮದುವೆ ಅವಾಂತರ ನಾಟಕ ಇಂದು
ನಾಗಮಂಗಲ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯುತ್ತಿರುವ 9ನೇ ವರ್ಷದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದಲ್ಲಿ  ಜು. 18ರಂದು ನಾಗಮಂಗಲ ಕನ್ನಡ ಸಂಘ ತಂಡದ ರಂಗಣ್ಣನ ಮದುವೆ ಅವಾಂತರ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕವನ್ನು ನಿರ್ದೇಶಿಸಿರುವ ಪಟ್ಟಣದ ಯುವ ಪ್ರತಿಭೆ ಭಾಸ್ಕರ್ ನೀನಾಸಂ,  ಮಲತಾಯಿ ತಾರತಮ್ಯದಿಂದ ಯಾತನೆ ಅನುಭವಿಸುವ ಮಗಳು ಹಾಗೂ ಬಡ್ಡಿ ಹಣದಿಂದ ಬಡವರನ್ನು ವಂಚಿಸುವ ಸಾಹುಕಾರ, ತನ್ನ ಇಳಿವಯಸ್ಸಿನಲ್ಲಿಯೂ ಮದುವೆ ಚಪಲ ಹಚ್ಚಿಕೊಂಡಂತಹ ಸಾರ್ವತ್ರಿಕವಾದ ಕೌಟುಂಬಿಕ ಸಾಮಾಜಿಕ ಬಿಕ್ಕಟ್ಟನ್ನು ಪ್ರತಿಬಿಂಬಿಸುವ ಕಥೆಯನ್ನು ನಾಟಕ ರೂಪದಲ್ಲಿ  ಐ.ಬಿ. ದತ್ತರಗಿ ರಚಿಸಿದ್ದಾರೆ. ಎಲ್ಲ ವರ್ಗದ ಸಮಾಜದ ಪ್ರತಿನಿಧಿಕ ರೂಪದಂತಿರುವ ಈ ನಾಟಕ ಜೀವನದಲ್ಲಿ ಕಲೆ, ಸಂಸ್ಕೃತಿಯ ಮಹತ್ವವನ್ನು ಕಲಾತ್ಮಕವಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದ್ದಾರೆ. ಸಮಾರೋಪ: ಕನ್ನಡ ಸಂಘ ಕಳೆದ ಜು.13 ಆಯೋಜಿಸಿರುವ 9ನೇ ವರ್ಷದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವಕ್ಕೆ ಜು.19ರಂದು ತೆರೆಬೀಳಲಿದೆ. ರಂಗಕರ್ಮಿ ಹಾಗೂ ಚಲನಚಿತ್ರ ನಟ ಶ್ರೀನಾಥ್ ಸಮಾರೋಪ ಭಾಷಣ ಮಾಡುವರು. ಬೆಂಗಳೂರಿನ ರಂಗ ಕರ್ಮಿ ಶಶಿಧರ್ ಭಾರಿಘಾಟ್, ನಿರ್ಮಾಣ್ ಶೆಲ್ಟರ್ ವ್ಯವಸ್ಥಾಪಕ ನಿರ್ದೇಶಕ ವಿ. ಲಕ್ಷ್ಮೀನಾರಾಯಣ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷೆ ಮೀರಾ ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸುವರು. ನಂತರ ಉಡುಪಿಯ ರಂಗಭೂಮಿ ತಂಡ ಹೆಚ್.ಪಿ. ರವಿರಾಜ್ ನಿರ್ದೇಶನದ ನಾಗಮಂಡಲ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ಕನಕ ಸಂಸ್ಕೃತಿ ಕಮ್ಮಟ ನಾಳೆ
ಪಾಂಡವಪುರ: ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಜುಲೈ 19ರಂದು 10.30ಕ್ಕೆ ಕನಕ ಸಂಸ್ಕೃತಿ ಕಮ್ಮಟವನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬೋರೇಗೌಡ ಚಿಕ್ಕಮರಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಹಾಗೂ ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಡೆವ ಕಾರ್ಯಕ್ರಮವನ್ನು ವಿದ್ಯಾ ಪ್ರಚಾರ ಸಂಘದ ಕೆ.ವಿ.ಬಸವರಾಜು ಉದ್ಘಾಟಿಸುವರು.ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕೇಂದ್ರ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ನಾರಾಯಣ ಗೌಡ, ಉಪ ಪ್ರಾಂಶುಪಾಲ ಪ್ರೊ.ಕೆ.ರಾಮೇಗೌಡ ಅತಿಥಿಗಳಾಗಿ ಭಾಗವಹಿಸುವರು.ಅಪಘಾತ: ಇಬ್ಬರಿಗೆ ಗಾಯ
ಶ್ರೀರಂಗಪಟ್ಟಣ: ಟ್ರ್ಯಾಕ್ಟರ್ ಬೈಕೈಗೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗಂಜಾಂ ಗ್ರಾಮದ ಗುಂಬಜ್ ರಸ್ತೆಯ ಆರಕ್ಷಕ ಉಪಠಾಣೆ ಎದುರು ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗೋವಿಂದರಾಜು(25), ರಾಜೇಂದ್ರ(28) ಮೈಸೂರಿನ ಕೆಆರ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೋಟಿಂಗ್ ರದ್ದು: ಕೆಆರ್‌ಎಸ್ ಜಲಾಶಯದಿಂದ ಕಾವೇರಿ ನದಿಗೆಹೆಚ್ಚಿನ ನೀರು ಹರಿಯ ಬಿಡುತ್ತಿರುವುದರಿಂದ ತಾಲೂಕಿನ ಪ್ರವಾಸಿ ತಾಣವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುಂಜಾಗೃತ ಕ್ರಮವಾಗಿ ಬೋಟಿಂಗ್ ರದ್ದು ಪಡಿಸಿರುವುದಾಗಿ ರಂಗನತಿಟ್ಟು ಪಕ್ಷಿಧಾಮ ವಲಯಾಧಿಕಾರಿ ತಿಳಿಸಿದ್ದಾರೆ.
ಪ್ರತಿಭಟನೆ: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!