ಪಾಂಡವಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಮತ್ತು ಪ್ರಕರಣ ತಡೆಯುವಲ್ಲಿ ವಿಫಲವಾಗಿರುವ ಗೃಹ ಸಚಿವ ಕೆ.ಜೆ. ಜಾರ್ಜ್ರನ್ನು ಸಂಪುಟದಿಂದ ಹೊರ ಹಾಕುವಂತೆ ಒತ್ತಾಯಿಸಿದ ಬಿಜೆಪಿ ಟೌನ್ ಘಟಕ ಸೋಮವಾರ ಕರೆ ನೀಡಿದ್ದ ಪಾಂಡವಪುರ ಬಂದ್ ಬಹುತೇಕ ಯಶಸ್ವಿಯಾಗಿದೆ.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು ಹಾಗೂ ಚಿತ್ರ ಮಂದಿರಗಳ ಮಾಲೀಕರು ತಮ್ಮ ವಹಿವಾಟುಗಳನ್ನು ಸ್ಥಗಿತಗೊಳಿಸುವ ಮೂಲಕ ಪಾಂಡವಪುರ ಬಂದ್ಗೆ ಸಂಪೂರ್ಣ ಸಹಕಾರ ನೀಡಿದರು. ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು ಬಂದ್ಗೆ ಸಹಕರಿಸದೇ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸಿದವು. ಬಂದ್ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಿಗೆ ಸಾಮೂಹಿಕವಾಗಿ ರಜೆ ಘೋಷಿಸಲಾಗಿತ್ತು. ಆದರೆ, ಬಸ್ ಸಂಚಾರ ಎಂದಿನಂತೆ ಇತ್ತು.
ಬಿಕೋ ಎನ್ನುವ ವಾತಾವರಣ: ಬಂದ್ನಿಂದಾಗಿ ಪಟ್ಟಣದಲ್ಲಿ ಬಿಕೋ ಎನ್ನುವ ವಾತಾವಣ ನಿರ್ಮಾಣವಾಗಿತ್ತು. ಟೌನ್ ಬಿಜೆಪಿ ಘಟಕದ ಅಧ್ಯಕ್ಷ ಬೀರಶೆಟ್ಟಹಳ್ಳಿ ಭಾಸ್ಕರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೆಳಗ್ಗೆನಿಂದಲೇ ಪಟ್ಟಣದಲ್ಲಿ ಸಂಚರಿಸಿ, ಅಲ್ಲಲ್ಲಿ ಬಾಗಿಲು ತೆರೆದು ವಹಿವಾಟು ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾದರು. ನಂತರ ಪಟ್ಟಣದ ಡಾ. ರಾಜಕುಮಾರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.
ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಇಲಾಖೆ ಕಂಡರೂ ಕಾಣದಂತೆ ಮೌನವಹಿಸಿದೆ. ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅತ್ಯಾಚಾರಿಗಳನ್ನು ಗಲ್ಲಿ ಗೇರಿಸಬೇಕು. ಗೃಹ ಸಚಿವ ಕೆ.ಜೆ.ಜಾರ್ಜ್ ರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕಲಾಪ ಬಹಿಷ್ಕಾರ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡಯುತ್ತಿರುವಂತಹ ಅತ್ಯಾಚಾರ ಖಂಡಿಸಿ ಪಟ್ಟಣದಲ್ಲಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ವಕೀಲರ ಸಂಘದ ಎದುರು ಜಮಾಯಿಸಿದ ನ್ಯಾಯವಾದಿಗಳು ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಮನು ಮಾತನಾಡಿ, ಯುವತಿರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಜರುಗುತ್ತಿವೆ. ಅತ್ಯಾಚಾರಿಗಳ ರಾಜ್ಯವೆಂದು ಕರ್ನಾಟಕ ರಾಷ್ಟ್ರದಲ್ಲಿ ಹೆಸರು ಮಾಡುತ್ತಿದೆ. ಇಷ್ಟಾದರೂ ರಾಜ್ಯ ಸರ್ಕಾರ ಮಾತ್ರ ಇಂತಹ ಅತ್ಯಾಚಾರಿಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲು ವಿಫಲವಾಗುತ್ತಿದೆ ಎಂದು ದೂರಿದರು.
ಸರ್ಕಾರ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ಅತ್ಯಾಚಾರ ಪ್ರಕರಣದಲ್ಲಿ ಸಾಬೀತಾದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಜೊತೆಗೆ ಮಹಿಳೆಯರನ್ನು ರಕ್ಷಿಸುವಂತಹ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಕೆರೆತೊಣ್ಣೂರು ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಕಾಳೇಗೌಡ, ಖಜಾಂಚಿ ಟಿ.ಎಸ್.ಶ್ರೀಧರಮೂರ್ತಿ, ನಿರ್ದೇಶಕರಾದ ಎಚ್.ಎಂ.ಕೃಷ್ಣ, ರವಿಶಂಕರ್, ಲಕ್ಷ್ಮೀಶ್ ಭಾಗವಹಿಸಿದ್ದರು.