ಮೈಸೂರು

ಜಿಲ್ಲಾಡಳಿತ ಬಡಿದೆಬ್ಬಿಸಲು ಡಿಸಿ ಕಚೇರಿಗೆ ಮುತ್ತಿಗೆ

ಮೈಸೂರು: ಜಡ್ಡುಗಟ್ಟಿರುವ ಜಿಲ್ಲಾಡಳಿತವನ್ನು ಬಡಿದೆಬ್ಬಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.
ಗನ್‌ಹೌಸ್ ಬಳಿಯಿಂದ ಮೆರವಣಿಗೆ ಹೊರಟ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮುತ್ತಿಗೆ ಹಾಕಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಬಿನಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆಯಿಂದ ನಷ್ಟವಾಗಿರುವ ಫಸಲಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ರೈತರು ಸರಬರಾಜು ಮಾಡುತ್ತಿರುವ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಹಾಲು ಉತ್ಪಾದಕರ ರಕ್ಷಣೆ ಮಾಡಬೇಕು. ಸರ್ಕಾರದ ಸಹಾಯಧನವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು.
ಕೆ.ಆರ್. ನಗರ ತಾಲೂಕು ಚುಂಚನಕಟ್ಟೆಯಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಸಹಕಾರಿ ಕ್ಷೇತ್ರಕ್ಕೆ ತಂದು ಪುನಶ್ಚೇತನಗೊಳಿಸಬೇಕು. ಬಣ್ಣಾರಿ ಕಾರ್ಖಾನೆ ಮತ್ತು ಅಂಬಿಕಾ ಶುಗರ್ಸ್‌ನವರು ಕಳೆದ ಸಾಲಿನ ಬಾಕಿಯನ್ನು ಕಬ್ಬು ಬೆಳೆಗಾರರಿಗೆ ಪಾವತಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ನಿಗಿಸಬೇಕು. ರಸ್ತೆಗಳ ದುರಸ್ತಿ, ಅಚ್ಚುಕಟ್ಟು ಪ್ರದೇಶದ ರಸ್ತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
6 ಗಂಟೆ ತ್ರಿಫೇಸ್ ನೀಡಿ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಕನಿಷ್ಠ 6 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ರಾತ್ರಿ ವೇಳೆಯಲ್ಲಿಯೂ ಸಮರ್ಪಕವಾಗಿ ವಿದ್ಯುತ್ ಹರಿಸಬೇಕು. ಪರೀಕ್ಷೆ ವೇಳೆ ತೊಂದರೆಯಾಗದಂತೆ ಗ್ರಾಮಾಂತರ ಪ್ರದೇಶದ ಗೃಹ ಬಳಕೆಗೆ ವಿದ್ಯುತ್ ಪೂರೈಸಬೇಕು. ಟ್ರಾನ್ಸ್‌ಫಾರ್ಮರ್ ಸುಟ್ಟ 5-7 ದಿನದೊಳಗೆ ಬದಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ಇದಕ್ಕಾಗಿ ಸೆಸ್ಕ್ ಸಹಾಯವಾಣಿ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬಗರ್‌ಹುಕುಂ ಸಾಗುವಳಿದಾರರು ತಾಲೂಕು ದರಖಾಸ್ತು ಸಮಿತಿ ಮುಂದೆ ಸಲ್ಲಿಸಿರುವ ದರಖಾಸ್ತು ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಸಾಗುವಳಿ ಚೀಟಿ ನೀಡಬೇಕು. ಅರಣ್ಯ ಇಲಾಖೆಯವರು ದರಖಾಸ್ತು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ಸಾಗುವಳಿದಾರರ ಸ್ವಾಧೀನಕ್ಕೆ ನೀಡಬೇಕು. ಅಕ್ರಮ ಮರಳು ದಂಧೆ ನಿಲ್ಲಿಸಬೇಕು ಎಂದು ವರು ಒತ್ತಾಯಿಸಿದರು.
ಕಬಿನಿ, ತಾರಕ, ವರುಣಾ, ಹಾರಂಗಿ ಇತರೆ ನೀರಾವರಿ ಯೋಜನೆಗಳಿಗೆ ಮತ್ತು ಇತರೆ ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಕಳೆದುಕೊಂಡ ರೈತ ಕುಟುಂಬಕ್ಕೆ ಶೀಘ್ರ ಪರಿಹಾರ ದೊರಕಿಸುವ ವ್ಯವಸ್ಥೆ ಮಾಡಬೇಕು. ಕೆರೆ ಅಭಿವೃದ್ಧಿ ಯೋಜನೆಯಡಿ ನಡೆಸಲಾಗಿರುವ ಹೂಳು ತೆಗೆಯುವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿವೇಶನ ದೊರಕಿಸಿ: ಮೈಸೂರು ತಾಲೂಕು ಕೆಂಚಲಗೂಡು ಮತ್ತು ಧನಗಳ್ಳಿ ಗ್ರಾಮದ ಬಡವರಿಗೆ ಜಿಲ್ಲಾಡಳಿತ ಒಪ್ಪಿಕೊಂಡಂತೆ ನಿವೇಶನ ದೊರಕಿಸಿ ಕೊಡಬೇಕು. ಒತ್ತುವರಿಯಾಗಿರುವ ಪಂಚಾಯಿತಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ಲಲಿತಾದ್ರಿಪುರ ಗ್ರಾಮದ ಕೆಲವು ರೈತರಿಗೆ ಭೂ ಪರಿಹಾರ ಹಣವನ್ನು ಕೂಡಲೇ ಪಾವತಿಸಬೇಕು. ಲಲಿತಾದ್ರಿಪುರ, ನಾಡನಹಳ್ಳಿ, ಯಾಂದಳ್ಳಿ, ಸರ್ಕಾರಿ ಉತ್ತನಹಳ್ಳಿ, ಹಂಚ್ಯಾ, ರಮ್ಮನಹಳ್ಳಿ, ಸಾತಗಳ್ಳಿ ಗ್ರಾಮಗಳ ರೈತರಿಗೆ ನ್ಯಾಯಾಲಯದಲ್ಲಿ ತೀರ್ಮಾನವಾಗಿರುವ ಹೆಚ್ಚಿನ ಪರಿಹಾರವನ್ನು ಕೂಡಲೇ ಪಾವತಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಭಾರ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಜಿಲ್ಲಾಡಳಿತ ಮಟ್ಟದಲ್ಲಿ ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗುವುದು. ಉಳಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ವರಿಷ್ಠರ ಮಂಡಳಿ ಸದಸ್ಯರಾದ ಎಂ.ಎಸ್. ಅಶ್ವತ್ಥ್‌ನಾರಾಯಣರಾಜೇ ಅರಸ್, ಕೆ.ಎಂ. ಪುಟ್ಟಸ್ವಾಮಿ, ಪ್ರೊ.ಕೆ.ಸಿ. ಬಸವರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಸಂಚಾಲಕ ಸರಗೂರು ನಟರಾಜ್, ಮುಖಂಡರಾದ ದೊ.ಕ. ವೆಂಕಟರಮಣೇಗೌಡ, ಎಚ್.ಎಸ್. ಬೋರಲಿಂಗೇಗೌಡ, ಜೋಗನಾಯಕ, ಪಿ.ಜೆ. ಶಿವಣ್ಣಶೆಟ್ಟಿ ಮೊದಲಾದವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!