ಮೈಸೂರು: ಮಹಿಳೆ ಮೇಲೆ ಹಲ್ಲೆ ನಡೆಸಿದ ಒಂದೇ ಕುಟುಂಬದ ಮೂವರಿಗೆ ಇಲ್ಲಿನ ನ್ಯಾಯಾಲಯವು ತಲಾ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೈಸೂರು ತಾಲೂಕು ಚೋರನಹಳ್ಳಿ ನಿವಾಸಿಗಳಾದ ದೊಡ್ಡ ದೇವಯ್ಯ ಎಂಬವರ ಪುತ್ರ ದೊಡ್ಡಯ್ಯ, ಇವರ ಪತ್ನಿ ಮಹಾದೇವಮ್ಮ ಮತ್ತು ಪುತ್ರ ಮರಿಸ್ವಾಮಿ ಶಿಕ್ಷೆಗೆ ಗುರಿಯಾದವರು. ಈ ಮೂವರು ಚೋರನಹಳ್ಳಿ ಗ್ರಾಮದ ದೇವಣ್ಣ ಎಂಬವರ ಪತ್ನಿ ರಾಧಾ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. 2010ರ ಜು.18 ರಂದು ರಾಧಾ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅಲಸಂದೆ ಕಟಾವಿಗೆ ಹೋಗಿದ್ದರು. ಈ ವೇಳೆ ದೊಡ್ಡಯ್ಯ, ಮಹಾದೇವಮ್ಮ ಮತ್ತು ಮರಿಸ್ವಾಮಿ ದನಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ರಾಧಾ ಅವರೊಂದಿಗೆ ಮೂವರು ಜಗಳ ತೆಗೆದು, ರಾಧಾ ಅವರ ಕೈಗೆ ಕುಡುಗೋಲಿನಿಂದ ಹೊಡೆದು ಗಾಯಗೊಳಿಸಿದ್ದರು. ಈ ಬಗ್ಗೆ ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ತಟ್ಟಂಡ ದಮಯಂತಿ ಸೋಮಯ್ಯ ಅವರು ಆರೋಪ ರುಜುವಾತಾಗಿದೆ ಎಂದು ಮೂವರಿಗೂ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 3200 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.