ಮೈಸೂರು: ತಾನು ಹೈಕೋರ್ಟ್ ನ್ಯಾಯಾಧೀಶ ಎಂದು ಹೇಳಿಕೊಂಡು ತಹಸೀಲ್ದಾರ್ ಸೇರಿದಂತೆ ಹಲವರನ್ನು ವಂಚಿಸಿದ್ದ ಆರೋಪಿಯನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮೈಸೂರಿನ ಮಹದೇವಪುರ ನಿವಾಸಿ ಎಂ.ಬಿ. ಶಂಕರ್ (40) ಬಂಧಿತ ಆರೋಪಿ. ತಾನು ಹೈಕೋರ್ಟ್ ನ್ಯಾಯಾಧೀಶ ಎಂದು ಹೇಳಿ ಮೈಸೂರು ತಹಸೀಲ್ದಾರ್ ನವೀನ್ ಜೋಸೆಫ್ ಅವರನ್ನು ವಂಚಿಸಿದ್ದ. ಈ ಬಗ್ಗೆ ಅನುಮಾನಗೊಂಡ ನವೀನ್ ಅವರು ಹೈಕೋರ್ಟ್ ನ್ಯಾಯಾಧೀಶರನ್ನು ನೇರವಾಗಿ ಭೇಟಿಯಾಗಿ, ನಡೆದ ವಿಚಾರ ತಿಳಿಸಿದ್ದರು. ನ್ಯಾಯಾಧೀಶರು ದೂರು ದಾಖಲಿಸುವಂತೆ ಸೂಚಿಸಿದ್ದರು. ಅದರಂತೆ ತಹಸೀಲ್ದಾರ್ ನವೀನ್ ಅವರು ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿ ಶಂಕರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಹಲವರಿಗೆ ಚೆಕ್ ನೀಡಿದ್ದು, ಆ ಚೆಕ್ಗಳು ಬೌನ್ಸ್ ಆಗಿರುವುದು ಬೆಳಕಿಗೆ ಬಂದಿದೆ ಎಂದು ಕೆ.ಆರ್. ಉಪ ವಿಭಾಗದ ಎಸಿಪಿ ಎ.ಎನ್. ಪ್ರಕಾಶ್ಗೌಡ ತಿಳಿಸಿದ್ದಾರೆ.