ಪಿರಿಯಾಪಟ್ಟಣ: ಜಮೀನಿನಲ್ಲಿ ಅಕ್ರಮವಾಗಿ ಬೀಟೆಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 3 ಲಕ್ಷ ಬೆಲೆ ಬಾಳುವ ಬೀಟೆ ಮರ ಹಾಗೂ ಸಾಗಣೆಗೆ ಬಳಸುತ್ತಿದ್ದ ವಾಹನವನ್ನು ತಾಲೂಕಿನ ದೊಡ್ಡಹೊನ್ನೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ.
ಗ್ರಾಮದ ದೇವರಾಜು ಮತ್ತು ಸುಬ್ರಹ್ಮಣ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 2 ಬೀಟೆ ಮರಗಳನ್ನು ಕಡಿದು ಐಷರ್ ವಾಹನಕ್ಕೆ ತುಂಬಿಕೊಂಡು ಸಾಗಿಸಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮರಗಳನ್ನು ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಸುಮಾರು 8 ರಿಂದ 10 ಮಂದಿ ಮರಗಳ್ಳರು ಪರಾರಿಯಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಅವರನ್ನು ಹಿಡಿಯುವ ಯತ್ನದಲ್ಲಿ ಗಾಳಿಯಲ್ಲಿ ಗುಂಡನ್ನೂ ಹಾರಿಸಿರುವ ಘಟನೆ ಜರುಗಿದೆ. ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ.
ಜಮೀನಿನ ಮಾಲೀಕರಾದ ದೇವರಾಜು ಹಾಗೂ ಸುಬ್ರಹ್ಮಣ್ಯ ಎಂಬುವರೂ ಸಹ ತಪ್ಪಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಡಿಆರ್ಎಫ್ಒ ರವೀಂದ್ರ, ಸಿಬ್ಬಂದಿ ರಾಮೇಗೌಡ, ದಂಡಯ್ಯ, ಪರಶುರಾಂ, ವಾಹನ ಚಾಲಕ ಬಸವರಾಜು ಇದ್ದರು.