ಕ.ಪ್ರ. ವಾರ್ತೆ, ನಂಜನಗೂಡು, ಆ.6
ಹತ್ತಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ತಾಲೂಕಿನ ಆದಿವಾಸಿ ಕಾಲೋನಿಯ ನಾಗಣಾಪುರ ಗ್ರಾಮದಲ್ಲಿ ಸ್ವಾಭಿಮಾನಿ-66 ಹಾಗೂ ಗ್ರಾಮಸ್ಥರು ಮತ್ತು ಕಾರ್ಯಕರ್ತರು ಏರ್ಪಡಿಸಿದ್ದ ಆದಿವಾಸಿಗಳಿಗೆ ರಗ್ಗು, ಮತ್ತಿತರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅಸಹಾಯಕರು, ಬಡವರು, ಶೋಷಿತರ ಬಗ್ಗೆ ತಮ್ಮ ರಾಜಕೀಯ ಜೀವನದಲ್ಲಿ ವಿಶೇಷವಾದ ಚಿಂತನೆ ಮತ್ತು ಅಭಿಮಾನ ಇರಿಸಿಕೊಂಡಿದ್ದೇನೆ. ಸರ್ಕಾರದ ನೆರವಿನ ಜತೆಗೆ ವೈಯಕ್ತಿಕ ಸಹಾಯ ನೀಡಲು ಬಯಸುತ್ತೇನೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ದೃಷ್ಟಿಯಿಂದ ಮಾನವೀಯತೆ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ತಮ್ಮ ಜೀವಮಾನದ ಗುರಿಯಾಗಿದೆ. ಇದರಲ್ಲಿರುವ ಸಂತೋಷ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಕಳೆದ 35 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಮಾನವೀಯತೆಯ ಸಮಾರಂಭವನ್ನು ನಾನು ಮರೆಯುವುದಿಲ್ಲ. ನಾನು ಯಾವಾಗಲೂ ಬಡವರ, ಹಿಂದುಳಿದ ವರ್ಗದವರ, ಶೋಷಣೆಗೊಳಗಾದವರ, ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಇದೇ ವೇಳೆ ನೂರಾರು ಆದಿವಾಸಿ ಜನಾಂಗದವರಿಗೆ ಮತ್ತು ಬಡ ಕುಟುಂಬದವರಿಗೆ ಹೊದಿಕೆಗಳು, ಗೃಹೋಪಯೋಗಿ ವಸ್ತುಗಳು ಮತ್ತು ಶಾಲೆಗಳಿಗೆ ಕುಡಿಯುವ ನೀರಿನ ಫಿಲ್ಟರ್ಗಳನ್ನು, ಅಂಧರಿಗೆ ಕನ್ನಡಕಗಳನ್ನು ವಿತರಿಸಲಾಯಿತು.
ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಹೆಡಿಯಾಲ ಗ್ರಾಪಂ ಅಧ್ಯಕ್ಷ ಜೆ.ನೇಮತ್ ಖಾನ್, ಹುಲ್ಲಹಳ್ಳಿ ಸಮಿವುಲ್ಲಾ, ಕೆ.ಆರ್.ಮೋಹನಕುಮಾರ್, ಯು.ಎನ್.ಪದ್ಮನಾಭರಾವ್, ಡಾ.ಹರ್ಷವರ್ಧನ್, ಧೀರಜ್, ಸಂತೋಷ್, ಕುಂಬ್ರಳ್ಳಿ ಸುಬ್ಬಣ್ಣ,ಮಹದೇವಪ್ಪ, ಶೌಕತ್ ಅಲಿ ಖಾನ್, ಸಾದಿಕ್, ಪಿ.ಗೋವಿಂದ ರಾಜು, ಸರ್ಕಾರಿ ವಕೀಲ ನಂಜುಂಡಸ್ವಾಮಿ, ವೇಣುಗೋಪಾಲ್, ತಿಮ್ಮೇಗೌಡ, ರವಿ, ಗಿರೀಶ್, ಸುಶೀಲಮ್ಮ, ಪಂಕಜಮ್ಮ, ಹುಲ್ಲಹಳ್ಳಿ ಎಸ್ಐ, ಜಯಕುಮಾರ್ ಇದ್ದರು.