ಭ್ರಷ್ಟ ರಾಜಕೀಯ ವ್ಯವಸ್ಥೆ ವಿರುದ್ಧ ಹೋರಾಟ
ಕ.ಪ್ರ. ವಾರ್ತೆ, ರಾಯಚೂರು, ಏ.14
ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಹೋಗಲಾಡಿಸುವ ಉದ್ದೇಶ, ಮತದಾರರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಉದ್ದೇಶದಿಂದ ರಾಯಚೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಪತ್ರಕರ್ತ ಎಚ್. ವೀರನಗೌಡ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದಿನ ದಿನಮಾನದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಜನಪ್ರತಿನಿಧಿಗಳ ಅವಶ್ಯಕತೆಯಿದೆ. ಮತದಾರರು ಹಣಕ್ಕಾಗಿ ತಮ್ಮ ಮತ ಮಾರಾಟ ಮಾಡಿಕೊಳ್ಳುವಂಥ ದುಸ್ಥಿತಿಯಲ್ಲಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಎಲ್ಲರಿಂದಲೂ ಅಭಿವೃದ್ಧಿ ಕಡೆಗಣನೆ: ಜನರ ಶ್ರೇಯಸ್ಸಿಗೆ ದುಡಿಯುವ ಹಾಗೂ ಜನಪರ ನಿರಂತರ ಕಾಳಜಿಯುಳ್ಳ ವ್ಯಕ್ತಿಯ ಅಗತ್ಯತೆ ನಗರ ವಿಧಾನಸಭೆ ಕ್ಷೇತ್ರದಲ್ಲಿದೆ. ಇದುವರೆಗೆ ಅಧಿಕಾರ ನಡೆಸಿದ ಎಲ್ಲರೂ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ನಗರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಜನಪ್ರತಿನಿಧಿಗಳು ಮಾಡಿಲ್ಲ ಎಂದು ಆರೋಪಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಮಿತ್ರರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ನಾಯಕರು ತಮಗೆ ಸ್ಪರ್ಧಿಸುವಂತೆ ಒತ್ತಾಯ ಹೇರಿದ್ದರು. ಆರಂಭದಲ್ಲಿ ಆ ಬಗ್ಗೆ ಯೋಚಿಸಿರಲಿಲ್ಲ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರ ಅವಶ್ಯಕತೆಯನ್ನು ಮನಗಂಡು ಸ್ಪರ್ಧಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.
ಮತದಾನ ಪವಿತ್ರ ಕಾರ್ಯ: ಮತದಾನ ಪವಿತ್ರ ಕಾರ್ಯವಾಗಿದೆ. ಎಲ್ಲರಿಗೂ ಪ್ರಾಮಾಣಿಕರನ್ನು ಆಯ್ದುಕೊಳ್ಳಲು ಇದು ಸಕಾಲವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಕ್ಷೇತ್ರದ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡುವಂತೆ ಮನವಿ ಮಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ಚಿಂತನೆಯೊಂದಿಗೆ ಮುಂದೆ ಬಂದಿರುವ ಅನೇಕರು ತಮ್ಮನ್ನು ಬೆಂಬಲಿಸಲಿದ್ದಾರೆ. ಏ.17ರಂದು ತಮ್ಮ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಮಲ್ಲಿಕಾರ್ಜುನ ಸ್ವಾಮಿ, ಶಶಿಕುಮಾರ್ ಶಾಸ್ತ್ರಿ, ವಿರೂಪಾಕ್ಷಯ್ಯ ಸ್ವಾಮಿ ಇದ್ದರು.
--
ಕೆಜೆಪಿ ಅಭ್ಯರ್ಥಿ ಪರ ಖುಸ್ರೋ ಮತಯಾಚನೆ
ಸಿಂಧನೂರು: ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಹದೇವಪ್ಪಗೌಡ ಅವರ ಪರ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಖುಸ್ರೋ ಖುರೇಶಿ ಬಳಗಾನೂರಲ್ಲಿ ಮತಯಾಚನೆ ಮಾಡಿದರು.
ಗ್ರಾಮದ ಹೊರವಲಯದ ಮೋದಿನ್ ಪಾಷ ಅವರ ತೋಟದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಸಾವಿರಾರು ಕೋಟಿ ಹಣ ಮಂಜೂರು ಮಾಡಿದ್ದಾರೆ. ಆದರೆ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ ಬಂದಿರುವ ರಾಷ್ಟ್ರೀಯ ಪಕ್ಷಗಳು ಅವರ ಬಗೆಗೆ ಮೊಸಳೆ ಕಣ್ಣೀರು ಹಾಕಿ ಹಿಂದೆಯಿಂದ ತುಳಿಯುತ್ತಾ ಬಂದಿವೆ ಎಂದು ಟೀಕಿಸಿದರು.
ಪ್ರತಾಪಗೌಡ ಪಾಟೀಲ್ ತಮ್ಮ 5 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಲ್ಲಿನ ರಸ್ತೆಗಳ ದುಸ್ಥಿತಿಯೇ ಹೇಳುತ್ತವೆ. ಜನರಿಗೆ ಆಶ್ವಾಸನೆಗಳನ್ನು ನೀಡಿ ಅವರ ಬೆಂಬಲವನ್ನು ಪಡೆದು ಅವರಿಗೇ ಮೋಸ ಮಾಡಿರುವ ಪ್ರತಾಪಗೌಡರಿಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಛೇಡಿಸಿದರು.
ಈ ಸಂದರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಮಹದೇವಪ್ಪಗೌಡ, ಮುಖಂಡರಾದ ಮೋದಿನ್ ಪಾಷ ಜಾಗೀರದಾರ, ಅನ್ವರ್ ಪಾಷ ಸಿಂಧನೂರು, ಕಾಸಿಂಸಾಬ ಮುಜಾವರ್, ಜಾಕೀರ ಹುಸೇನ ಇನಾಂದಾರ, ಎಂ.ಡಿ.ಅನೀಫ್ ಮುಲ್ಲಾ, ಅಮರೇಶ ಕ್ಯಾತನಹಟ್ಟಿ, ಹನುಮಂತರಾಯಗೌಡ, ಟಿ.ಮಂಜುನಾಥ, ರಾಜಶೇಖರ ನಾಗಲೀಕರ, ಬುಳ್ಳನಗೌಡ, ವೀರನಗೌಡ ಮತ್ತಿತರರು ಉಪಸ್ಥಿತರಿದ್ದರು.