ರಾಯಚೂರು: ಪ್ರೇಮಿಗಳ ದಿನಾಚರಣೆ ಆಚರಿಸುವ ಬದಲು ರಾಷ್ಟ್ರಪುರುಷರ ಸ್ಮರಣೆ ದಿನಾಚರಿಸಲು ಹಿಂದೂ ಜನಜಾಗೃತಿ ಸಮಿತಿ ಪ್ರಮುಖರಾದ ಸುವರ್ಣ ಶ್ರೀಕಾಂತ್ ಮನವಿ ಮಾಡಿದ್ದಾರೆ.ಈ ಕುರಿತು ಶುಕ್ರವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀತಿಹೀನ ಪಾದ್ರಿ ವಾಲೈಂಟೇನ್ ಡೇ ಆಚರಿಸುವುದು ಸರಿಯಾದ ಪದ್ಧತಿಯಲ್ಲ. ಯುವಕರು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು. ಫೆ.14ರಂದು ರಾಷ್ಟ್ರಪುರುಷರ ಸ್ಮರಣೆಯ ದಿನವಾಗಿ ಆಚರಿಸಬೇಕೆಂದು ಒತ್ತಾಯಿಸಿದರು.ಹಿಂದೂ ಸಂಸ್ಕೃತಿಯಲ್ಲಿ ಎಲ್ಲರನ್ನೂ ಗೌರವದಿಂದ ಕಾಣಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರೇಮಿಗಳ ದಿನಾಚರಣೆ ದೇಶದ ಸಂಸ್ಕೃತಿಗೆ ತಕದ್ದಲ್ಲ. ಈ ಬಗ್ಗೆ ರಾಜ್ಯವ್ಯಾಪಿ ಮತ್ತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಕೃಷ್ಣವೇಣಿ, ಜಯಶ್ರೀ ಮಸ್ಕಿ, ವಿಜಯಲಕ್ಷ್ಮಿ, ವಾಣಿಶ್ರೀ, ಪದ್ಮ ಶೇಷಗಿರಿರಾವ್ ಇದ್ದರು.
ಮಾ.31ರಂದು ಸಾಮೂಹಿಕ ವಿವಾಹ
ಸಿಂಧನೂರು: ಮಾರ್ಚ್ 31 ರಂದು ಕನಕಗುರು ಪೀಠ, ಕನಕ ಯುವಸೇನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸುಕಾಲಪೇಟೆಯ ಗುರು ನಂಜುಂಡೇಶ್ವರ ಮಠದಲ್ಲಿ 250 ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಮಾ. 12 ರಿಂದ 31ರವರೆಗೆ ಪ್ರವಚನ ರತ್ನ ಮಡಿವಾಳಯ್ಯ ಸ್ವಾಮಿ ಜೇರಟಗಿ ಇವರಿಂದ ಗಾದಿಲಿಂಗೇಶ್ವರ ಪುರಾಣ ಆರಂಭಗೊಳ್ಳಲಿದ್ದು, ಮಾರ್ಚ್ 31ರಂದು ಸಂಪನ್ನವಾಗಲಿದೆ. ಸಾಮೂಹಿಕ ವಿವಾಹಕ್ಕೆ ಕನಕಗುರು ಪೀಠ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮಿ, ಗುಲ್ಬರ್ಗ ವಿಭಾಗದ ಸಿದ್ದರಾಮಾನಂದ ಪುರಿ ಸ್ವಾಮಿ ಆಗಮಿಸುವರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಕೆ. ಕರಿಯಪ್ಪ, ನಗರಸಭಾ ಸದಸ್ಯ ರಫೀ ಅಹ್ಮದ, ಜೆಡಿಎಸ್ ಮುಖಂಡ ಟಿ.ಹನುಮಂತಪ್ಪ, ನಂಜುಂಡಯ್ಯ ಗುರುವಿನ್, ಮೊಹಿನುದ್ದಿನ್ ಎತ್ಮಾರಿ, ಬಿ.ಲಿಂಗಪ್ಪ ಇದ್ದರು.
ಅರ್ಧಕ್ಕೆ ನಿಂತ ಸಮುದಾಯ ಭವನ
ಮುದಗಲ್: ಸಮೀಪದ ಬುದ್ದಿನ್ನಿ ಗ್ರಾಮದಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 2010-11ನೇ ಸಾಲಿನ ಎಚ್ಕೆಡಿಬಿ ಅನುದಾನದಲ್ಲಿ ಶಾಸಕ ಪ್ರತಾಪಗೌಡ ಪಾಟೀಲ್ರು ಸುಮಾರು 1,50 ಲಕ್ಷ ಅನುದಾನ ನೀಡಿ ಸಮುದಾಯ ಭವನ ಕಾಮಗಾರಿ ಆರಂಭಿಸಿದರು. 13 ನೇ ಹಣಕಾಸು ಯೋಜನೆಯಡಿ ಅನುದಾನ ನೀಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು 2 ವರ್ಷ ಗತಿಸಿದರೂ ಈ ಬಗ್ಗೆ ಯಾರು ಗಮನ ಹರಿಸಿಲ್ಲ ಎಂದು ಗ್ರಾಮದ ಅಮರೇಶ, ಮಲ್ಲಪ್ಪ, ಬಸಪ್ಪ, ಮಾನಪ್ಪ, ಕಲ್ಲಪ್ಪ ಆರೋಪಿಸಿದ್ದಾರೆ.