ಚಿತ್ತಾಪುರ: ಪ್ರದೇಶ ಕುರುಬರ ಸಂಘ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವಕ ಸಂಘ ಹಾಗೂ ಕುರುಬ ಗೊಂಡ ನೌಕರರ ಸಂಘದ ಸಂಯುಕ್ತ ಅಶ್ರಯದಲ್ಲಿ ಫೆ.18 ರಂದು ಭಕ್ತ ಕನಕದಾಸರ 525ನೇ ಜಯಂತಿ ಹಾಗೂ ಕಾಳಿದಾಸ ಸೌಹಾರ್ದ ಪತ್ತಿನ ಸಹಕಾರಿ ಸಂಘ ಉದ್ಘಾಟನೆ ಹಾಗೂ 371 (ಜೆ) ಕಲಂ ತಿದ್ದುಪಡಿಯ ರೂವಾರಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸನ್ಮಾನ ಸಮಾರಂಭ ಚಿತ್ತಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಜುಮ್ಮಣ್ಣ ಪೂಜಾರಿ ತಿಳಿಸಿದ್ದಾರೆ. ಇಲ್ಲಿನ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.18 ರಂದು ಬೆಳ್ಳಿಗೆ ಬಿರಲಿಂಗೇಶ್ವರ ಗುಡಿಯಿಂದ ಕನಕದಾಸರ ಭಾವಚಿತ್ರದ ಪೂಜೆಯೊಂದಿಗೆ ಮೆರವಣಿಗೆಯನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಉದ್ಘಾಟಿಸುವರು. ಅಂದು ಮಧ್ಯಾಹ್ನ 1ಕ್ಕೆ ಬಹಿರಂಗ ಸಭೆ ಸಾನಿಧ್ಯವನ್ನು ತಿಂಥಣಿ ಬ್ರಿಜ್ನ ಕನಕ ಗುರು ಪೀಠದ ಸಿದ್ದರಾಮನಂದಪುರಿ ಸ್ವಾಮಿಗಳು ಹಾಗೂ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ವಹಿಸುವರು. ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಜ್ಯೋತಿ ಬೆಳಗಿಸುವರು. ಶಾಸಕ ವಾಲ್ಮೀಕಿ ನಾಯಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು, ಜಿಲ್ಲಾ ಆಧ್ಯಕ್ಷ ದೇವಿಂದ್ರಪ್ಪ ಮರತೂರ ಧ್ವಜಾರೋಹಣ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಅಲಮಪ್ರಭು ಪಾಟೀಲ್, ಬಸಣ್ಣ ಗೌನಳ್ಳಿ, ಎಸ್.ಎಸ್. ಪೂಜಾರಿ, ಲಿಂಗಾರೆಡ್ಡಿ ಭಾಸರೆಡ್ಡಿ, ಜಿಪಂ ಉಪಾಧ್ಯಕ್ಷ ಪಾರ್ವತಿ ಶಂಕರ ಚವ್ವಾಣ ಸೇರಿದಂತೆ ಸ್ಥಳೀಯ, ಜಿಲ್ಲಾ, ರಾಜ್ಯಮಟ್ಟದ ಧುರಿಣರು, ವಿವಿಧ ಪಕ್ಷಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.