ಲಿಂಗಸ್ಗೂರು: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದ್ದು, ಕೂಡಲೇ ತಜ್ಞ ವೈದ್ಯರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪಟ್ಟಣ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರಿಗೆ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು, ಜರ್ಮನ್ ಸಹಯೋಗದೊಂದಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗಿದ್ದು, ಲಿಂಗಸ್ಗೂರು, ದೇವದುರ್ಗ, ಸುರಪುರ ಸೇರಿದಂತೆ ವಿವಿಧ ತಾಲೂಕುಗಳಿಂದ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ಸ್ತ್ರೀರೋಗ ಮತ್ತು ಹೃದಯರೋಗ ತಜ್ಞ ವೈದ್ಯರಿಲ್ಲದೆ ಬಡ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಳೆದ ಸೆಪ್ಟಂಬರ್ನಲ್ಲಿ ವೈದ್ಯರ ನೇಮಕ ಮಾಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು. ಇನ್ನು ಒಂದು ತಿಂಗಳಲ್ಲಿ ನೇಮಕ ಮಾಡದಿದ್ದರೆ ಕರವೇ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಾಲೂಕು ಅಧ್ಯಕ್ಷ ಜಿಲಾನಿಪಾಶ, ಅಜೀಜ್ ಪಾಶಾ, ಆಂಜನೇಯ ಭಂಡಾರಿ, ಬಿ.ಎಸ್. ನಾಯಕ, ರವಿ ಕುಮಾರ, ಅಮರೇಶ ನಾಯಕ ಸೇರಿದಂತೆ ಇದ್ದರು.
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ರಾಯಚೂರು: 2012- 13ನೇ ಸಾಲಿಗೆ ಮಕ್ಕಳ ಅಭಿವೃದ್ಧಿ, ರಕ್ಷಣೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಕರೆಯಲಾಗಿದೆ. ಅರ್ಜಿದಾರರು ಕಳೆದ 10 ವರ್ಷಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು. ಸಂಘ ಸಂಸ್ಥೆಗಳಲ್ಲಿ ವೇತನ ಪಡೆಯುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಲ್ಲ. ಅದೇ ರೀತಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಲವು ವರ್ಷ ಅಸಾಧಾರಣ ಸೇವೆ ಸಲ್ಲಿಸಿರಬೇಕು ಎಂದು ಪ್ರಕಟಣೆ ತಿಳಿಸಿದೆ. ನಿಗದಿತ ಅರ್ಜಿ ನಮೂನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐ.ಬಿ. ರಸ್ತೆ, ರಾಯಚೂರು ಇಲ್ಲಿ ಲಭ್ಯವಿದ್ದು, ಅರ್ಜಿಯನ್ನು ಫೆ. 28ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.
ಜವಳಗೇರಾ; ಶವ ಪತ್ತೆ
ರಾಯಚೂರು: ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ನೀರಾವರಿ ಇಲಾಖೆಯ ಸಿಬ್ಬಂದಿ ಕಾರ್ಯನಿಮಿತ್ತ ಕಾಲುವೆ ಮೇಲೆ ಸಂಚಾರದಲ್ಲಿದ್ದಾಗ ಕಾಲುವೆಯಲ್ಲಿ ಅಪರಿಚಿತ ಗಂಡಸಿನ ಶವ ತೇಲಿಬಂದಿದೆ ಎಂದು ಪೊಲೀಸರಿಗೆ ದೂರಿತ್ತಿದ್ದಾರೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.