ರಾಯಚೂರು

ಕೃಷ್ಣೆ, ತುಂಗಭದ್ರೆಗೆ ಬೆಚ್ಚಿದ ಜನತೆ

ಕ.ಪ್ರ. ವಾರ್ತೆ ರಾಯಚೂರು ಆ.4
ಮಹಾರಾಷ್ಟ್ರ ಮತ್ತು ರಾಜ್ಯದ ಶಿವಮೊಗ್ಗ ಸುತ್ತಲಿನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಆತಂಕ ಎದುರಾಗಿದೆ. ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು, ಗದ್ದೆಗಳಿಗೆ ನುಗ್ಗಿದ್ದರಿಂದ ರೈತರು ಬೆಳೆ ಹಾನಿಯ ಆತಂಕಕ್ಕೆ ಸಿಲುಕಿದ್ದಾರೆ.
ಶಿವಮೊಗ್ಗ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಒಳಹರಿವು ಹೆಚ್ಚಿದೆ. ಪರಿಣಾಮ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹಾಗಾಗಿ ಜಲಾಶಯದಿಂದ ಲಕ್ಷಾಂತರ ರು. ನೀರು ಹೊರಬಿಡಲಾಗಿದ್ದು, ನದಿಯಲ್ಲಿ ಪ್ರವಾಹ ಪರಿಸ್ಥಿತಿಯಿದೆ.
ಮುನ್ನೆಚ್ಚರಿಕೆ: ತುಂಗಭದ್ರಾ ಅಣೆಕಟ್ಟೆಯಿಂದ ಸೋಮವಾರ 1.93 ಲಕ್ಷ ಕ್ಯುಸೆಕ್ ನೀರು ಹೊರಹರಿಸಿದ್ದರಿಂದ ನದಿಯಲ್ಲಿ ಪ್ರವಾಹ ಹೆಚ್ಚಿದ್ದು ಕಂಡುಬಂದಿತು. ರಾಜೋಳಿಬಂಡಾ ತಿರುವು ಯೋಜನೆಯ ಅಣೆಕಟ್ಟೆಯ ಮೇಲಿಂದ ನೀರು ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕೈಗೊಂಡಿದೆ.
ತುಂಗಭದ್ರಾ ನದಿ ತೀರದ ಸಿಂಧನೂರು, ಮಾನವಿ ತಾಲೂಕುಗಳ ಅನೇಕ ಗ್ರಾಮಗಳಲ್ಲಿ ಆತಂಕ ಎದುರಾಗಿದೆ. ಈಗಾಗಲೇ ನದಿ ತೀರದ ಗ್ರಾಮದ ರೈತರು ಅಳವಡಿಸಿಕೊಂಡಿದ್ದ ನೀರೆತ್ತುವ ಮೋಟಾರ್‌ಗಳನ್ನು ನದಿ ತೀರದಿಂದ ಸ್ಥಳಾಂತರಿಸಿದ್ದಾರೆ. ಆದರೆ ನದಿಯಲ್ಲಿ ಹೆಚ್ಚುತ್ತಿರುವ ಪ್ರವಾಹವು ಬತ್ತದ ಗದ್ದೆಗಳಲ್ಲಿನ ಬೆಳೆಗೆ ಹಾನಿಗೀಡು ಮಾಡುವ ಆತಂಕ ರೈತರಲ್ಲಿದೆ.
ಗದ್ದೆಗಳಿಗೆ ನುಗ್ಗಿದ ನೀರು: ಮಾನವಿ ತಾಲೂಕಿನ ಕಾತರಕಿ ಹಾಗೂ ಚೀಕಲಪರ್ವಿ ಗ್ರಾಮಗಳ ನದಿ ತೀರದಲ್ಲಿನ ಗದ್ದೆಗಳಿಗೆ ನೀರು ನುಗ್ಗಿದೆ. ಅದೇ ರೀತಿ ಸಿಂಧನೂರು ತಾಲೂಕಿನ ಧಡೇಸೂಗೂರು, ಕೆಂಗಲ್ ಮತ್ತಿತರೆಡೆ ಪ್ರವಾಹ ಪರಿಸ್ಥಿತಿ ಸತತ ಎರಡನೇ ದಿನವೂ ಮುಂದುವರಿದಿದೆ.
ರಾಯಚೂರು ತಾಲೂಕಿನ ತುಂಗಭದ್ರಾ ನದಿ ತೀರದ ತುಂಗಭದ್ರಾ ಗ್ರಾಮ, ಚಿಕ್ಕಮಂಚಾಲಿ ಮತ್ತಿತರೆಡೆಯ ನದಿ ತೀರದ ಗ್ರಾಮಗಳ ಗದ್ದೆಗಳಿಗೆ ನೀರು ನುಗ್ಗಿದೆ. ಅದರಿಂದಾಗಿ ರೈತರು ಆತಂಕಗೊಂಡಿದ್ದಾರೆ.
ಮಂತ್ರಾಲಯ ತೀರದಲ್ಲಿ ಕಟ್ಟೆಚ್ಚರ: ಮಂತ್ರಾಲಯದ ನದಿ ತೀರದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀಮಠದ ಆಡಳಿತವು ಭಕ್ತರಿಗೆ ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡುತ್ತಿದೆ. ಅದೇ ರೀತಿ ನದಿ ತೀರದಲ್ಲಿ ಪೊಲೀಸ್ ಕಾವಲು ಹಾಕಿದ್ದು ನದಿಗೆ ಸ್ನಾನಕ್ಕೆ ತೆರಳುವ ಭಕ್ತರಿಗೆ ಮುಂಜಾಗ್ರತೆ ವಹಿಸಲು ಸೂಚಿಸಲಾಗುತ್ತಿದೆ.
ಕೃಷ್ಣಾದಲ್ಲೂ ಪ್ರವಾಹ: ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಹೊರಹರಿಸುತ್ತಿರುವ ಕೃಷ್ಣಾ ನದಿಯ ನೀರು ಲಿಂಗಸ್ಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ನದಿ ತೀರದ ಗದ್ದೆಗಳಿಗೆ ನೀರು ನುಗ್ಗಿದ್ದು ರೈತರು ಬೆಳೆ ಹಾನಿಯ ಭೀತಿ ಎದುರಿಸುತ್ತಿದ್ದಾರೆ. ಮುಂದಾಲೋಚನೆಯಿಂದ ನದಿ ತೀರದಲ್ಲಿ ರೈತರು ಅಳವಡಿಸಿದ್ದ ಪಂಪ್‌ಸೆಟ್ ಸ್ಥಳಾಂತರಿಸಿದ್ದರಿಂದ ಹಾನಿಯಿಂದ ಪಾರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ರಾಯಚೂರು ತಾಲೂಕಿನ ಬುರ್ದಿಪಾಡ, ಆತ್ಕೂರು ಗ್ರಾಮಗಳಲ್ಲಿ ಆಂಧ್ರದ ಮಹೆಬೂಬ್ ನಗರ ಜಿಲ್ಲೆಯ ಜುರಾಲಾ ಅಣೆಕಟ್ಟೆಯ ಹಿನ್ನೀರಿನಿಂದ ಆತಂಕ ಎದುರಾಗಿದೆ. ಈ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಬೆಳೆ ನದಿ ನೀರಿನಲ್ಲಿ ಮುಳುಗಿದ್ದು ಬೆಳೆ ಹಾನಿಯ ಭೀತಿ ಎದುರಾಗಿದೆ.

ಜುರಾಲಾ ಜಲವಿದ್ಯುತ್ ಲಭ್ಯತೆ
ರಾಯಚೂರು: ಆಂಧ್ರದ ಸರ್ಕಾರದೊಂದಿಗೆ ಮಾಡಿಕೊಂಡ ವಿದ್ಯುತ್ ಒಪ್ಪಂದದಂತೆ ಮಹೆಬೂಬ್ ನಗರ ಜಿಲ್ಲೆಯ ಜುರಾಲಾ ಜಲ ವಿದ್ಯುದಾಗಾರದಿಂದ ರಾಜ್ಯಕ್ಕೆ ಸೋಮವಾರದಿಂದಲೇ ವಿದ್ಯುತ್ ದೊರೆಯಲಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಜುರಾಲಾ ವಿದ್ಯುತ್ ಕೇಂದ್ರದ ಒಟ್ಟು ಆರು ವಿದ್ಯುತ್ ಉತ್ಪಾದನೆ ಘಟಕಗಳ ಪೈಕಿ 2ನೇ ಘಟಕವು ದುರಸ್ತಿಗೆ ಸಿಲುಕಿದ್ದು, ಇನ್ನುಳಿದ ಐದು ಘಟಕಗಳಿಂದ ರಾಜ್ಯ ಜಾಲಕ್ಕೆ ಸೋಮವಾರ ಸಂಜೆಯವರೆಗೆ 72 ಮೆ.ವ್ಯಾ. ವಿದ್ಯುತ್ ಲಭ್ಯವಾಗಿದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ. ಒಟ್ಟು 234 ಮೆವ್ಯಾ ವಿದ್ಯುತ್ ಸಾಮರ್ಥ್ಯದ ಕೇಂದ್ರದಿಂದ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳು ತಲಾ 117 ಮೆವ್ಯಾ ವಿದ್ಯುತ್ ಪಡೆಯಲಿದ್ದು, ಸದ್ಯ ಕರ್ನಾಟಕಕ್ಕೆ 72 ಮೆವ್ಯಾ ವಿದ್ಯುತ್ ದೊರೆತಿದ್ದು, ಮಂಗಳವಾರ ಬೆಳಗ್ಗೆ ವೇಳೆಗೆ ಪೂರ್ಣ ಪ್ರಮಾಣದ ವಿದ್ಯುತ್ ದೊರೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ನಡುಗಡ್ಡೆ ನಿವಾಸಿಗಳ ರಕ್ಷಣೆಗೆ ರೈತ ಸಂಘದಿಂದ ಒತ್ತಾಯ
ಲಿಂಗಸ್ಗೂರು: ಬಸವಸಾಗರ ಜಲಾಶಯದಿಂದ ಲಕ್ಷಾಂತರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದ್ದು, ಪ್ರವಾಹ ಭೀತಿ ಎದುರಿಸುತ್ತಿರುವ ನಡುಗಡ್ಡೆ ನಿವಾಸಿಗಳಿಗೆ ಯಾವುದೇ ಅಪಾಯ ಸಂಭವಿಸದಂತೆ ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಗೆ ಜಲಾಶಯದಿಂದ ಲಕ್ಷಾಂತರ ಕ್ಯುಸೆಕ್ ನೀರು ಬಿಡುಗಡೆಯಿಂದ ನಡುಗಡ್ಡೆಯ ಮ್ಯಾದರಗಡ್ಡಿ, ಕರಕಲಗಡ್ಡಿ ಪ್ರದೇಶದ ಜಮೀನಿನಲ್ಲಿ ವಾಸಿಸುವ ರೈತಾಪಿ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡು ಬೇರೆಡೆ ಸ್ಥಳಾಂತರಿಸಿ ವಸತಿ, ಆಹಾರ ವ್ಯವಸ್ಥೆ ಕಲ್ಪಿಸಬೇಕೆಂದು ಪತ್ರಿಕೆಗಳು ಮೇಲಿಂದ ಮೇಲೆ ಪ್ರಕಟಿಸುತ್ತಾ ಬಂದಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಯರಗೋಡಿ ಶಾಲೆಯಲ್ಲಿ ಕಾಟಾಚಾರದ ತಾತ್ಕಾಲಿಕ ಗಂಜಿ ಕೇಂದ್ರ ತೆರೆಯದೆ ನಿವಾಸಿಗಳಿಗೆ ಶಾಶ್ವತ ವಸತಿ ಹಾಗೂ ಉಪ ಜೀವನಕ್ಕೆ ಬೇಕಾದ ಅಗತ್ಯ ಆಹಾರ ಸಾಮಗ್ರಿ ಕಲ್ಪಿಸಬೇಕು ಆಗ್ರಹಿಸಿದರು.
ಈ ವೇಳೆ ತಿಮ್ಮಣ್ಮ ಯಲಗಲದಿನ್ನಿ, ಅಮರಯ್ಯ ಹುಲಿಗುಡ್ಡ, ಕಡದರಗಡ್ಡಿ ಗ್ರಾಮದ ದೊಡ್ಡಬಸವ, ಬಸವರಾಜ, ಮಲ್ಲಪ್ಪ, ನಿಂಬೆಣ್ಣ ಯರಗೋಡಿ, ಬಸಪ್ಪ ಪೂಜಾರಿ, ಸಂಜೀವಪ್ಪ, ಮಲ್ಲಪ್ಪ, ಗುಂಡಪ್ಪ ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT