ಸಿಂಧನೂರು: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಪಂ ಮಟ್ಟದಲ್ಲಿ ಇಂತಹ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ಗ್ರಾಮದ ಪೊಲೀಸ್ ಕಾಲೋನಿಗೆ ಒದಗಿಸಿರುವ ಕುಡಿವ ನೀರು ಯೋಜನೆಗೆ ಚಾಲನೆ ನೀಡಿ ನಂತರ ಸರಳ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಪ್ರತಿ ಗ್ರಾಪಂ ಅಧಿಕಾರಿಗಳ, ಆಡಳಿತ ಮಂಡಳಿಗಳ ಸಾರ್ವಜನಿಕ ಸಹಕಾರದಿಂದ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಶ್ರಮಿಸುತ್ತಿದ್ದೇನೆ. ಬಳಗಾನೂರು, ತುರ್ವಿ ಹಾಳ, ಮಸ್ಕಿಗಳು ಪಟ್ಟಣ ಪಂಚಾಯಿತಿಗಳಾಗಿ ಪರಿವರ್ತನೆಗೊಳ್ಳಲಿವೆ ಎಂದರು. ಪಿಎಸ್‌ಐ ಮಹಾಂತೇಶ ಸಜ್ಜನ್, ಪಿಡಿಒ ಸಿ.ಎಚ್. ಮುದುಕಪ್ಪ ಮಾತನಾಡಿದರು.
ಸನ್ಮಾನ: ಶಾಸಕ ಪ್ರತಾಪಗೌಡ ಪಾಟೀಲ್, ತಾಪಂ ಇಒ ಜೆ.ಬಿ. ಹೂಗಾರ, ಪಿಡಿಒ ಸಿ.ಎಚ್ ಮುದುಕಪ್ಪ, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ, ಉಪಾಧ್ಯಕ್ಷ ಹನುಮೇಶ ಹೂಗಾರ, ಮಾಜಿ ಉಪಾಧ್ಯಕ್ಷ ಎಚ್.ಮಹಾಬಳೇಶ, ಶಿವಪ್ಪ ಗದ್ದಿ, ಪಿಎಸ್‌ಐ ಮಹಾಂತೇಶ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಹುಲ್ಲೂರ ಶೇಖರಪ್ಪ ಮೇಟಿ, ಅಜಯಕುಮಾರ ನಾಡಗೌಡ, ಬಳಗಾನೂರ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮಾಲಿಪಾಟೀಲ್, ಬಿ.ತಿಕ್ಕಯ್ಯ, ಯಂಕಪ್ಪ ನಾಯಕ, ತಾಪಂ ಮಾಜಿ ಸದಸ್ಯ ಬಸ್ಸನಗೌಡ, ವಿರುಪಣ್ಣ ಗುತ್ತೇದಾರ ಮತ್ತಿತರರು ಭಾಗವಹಿಸಿದ್ದರು.
ಸಿಬ್ಬಂದಿ-ಆಡಳಿತ 2 ಕಣ್ಣುಗಳಿದ್ದಂತೆಗುಲ್ಬರ್ಗ: ಸಂಸ್ಥೆಯ ಆಡಳಿತ ವ್ಯವಸ್ಥೆ ಮತ್ತು ನೌಕರರು ಎರಡು ಕಣ್ಣುಗಳಿದ್ದಂತೆ. ಎರಡೂ ಕಣ್ಣುಗಳ ದೃಷ್ಟಿ ಮಾತ್ರ ಒಂದೇ ಆಗಿರುವಂತೆ ಸಂಸ್ಥೆಯ ಅಭಿವೃದ್ಧಿಯೊಂದಿಗೆ ನಿಮ್ಮ ಯೋಗಕ್ಷೇವುವೇ ನನ್ನ ಬಹುದೊಡ್ಡ ಕನಸು ಎಂದು ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಹೇಳಿದರು. ಈಶಾನ್ಯ ಸಾರಿಗೆ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರ ಆಪ್ತ ವಲಯದಲ್ಲಿ ಸಂಸ್ಥೆಯ ನೌಕರರ ವಿವಿಧ ಸಂಘಟನೆಗಳಾದ ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾಮಂಡಳ, ಎಸ್ಸಿ ಎಸ್ಟಿ ನೌಕರರ ಸಂಘ, ಕನ್ನಡ ಕ್ರಿಯಾ ಸಮಿತಿ, ಲಿಂಗಾಯತ ಸಮಾಜ, ಕೋಲಿ ಸಮಾಜ, ಕುರುಬ ಸಮಾಜ ಹಾಗೂ ಮುಸ್ಲಿಂ ಸಮಾಜ ನೌಕರರ ಸಂಘಗಳ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೀವು ನನಗೆ ಸನ್ಮಾನಿಸುವ ಮೂಲಕ ನಿಮ್ಮ ಗೌರವವನ್ನು ಹೆಚ್ಚಿಸಿಕೊಂಡಿದ್ದೀರಿ. ಅಲ್ಲದೇ ಈ ಸಂಸ್ಥೆಗಾಗಿ ನಾನು ಸಲ್ಲಿಸುತ್ತಿರುವ ಸೇವೆಯ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದೀರಿ ಎಂದು ಹೇಳಿದರು. ವೇದಿಕೆಯಲ್ಲಿದ್ದ ಸಂಸ್ಥೆಯ ಹಿರಿಯ ನಿವೃತ್ತ ಅಧಿಕಾರಿ ಹಂಪಯ್ಯ ಮಾತನಾಡಿದರು.
ಬಳ್ಳುಂಡಗಿ: ಪುರಾಣ ಆರಂಭ
ಜೇವರ್ಗಿ: ತಾಲೂಕಿನ ಬಳ್ಳುಂಡಗಿಯಲ್ಲಿ ರೇವಣಸಿದ್ದೇಶ್ವರ ಹಾಗೂ ಸಿದ್ದರಾಮೇಶ್ವರರ ಪುರಾಣ ಆ.1ರಂದು ಆರಂಭವಾಗಿದೆ. ಒಂದು ತಿಂಗಳವರೆಗೆ ಪ್ರತಿ ದಿನ ಸಂಜೆ 7.30ರಿಂದ 8.30ರವರೆಗೆ ಪುರಾಣ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಸಿದ್ದರಾಮಯ್ಯ ಶಾಸ್ತ್ರಿ ಹಿರೇಮಠ ಅವರು ರೇವಣಸಿದ್ದೇಶ್ವರರಿಗೆ ರುದ್ರಾಭಿಷೇಕ ನಡೆಸಿಕೊಡಲಿದ್ದಾರೆ. ಹುಬ್ಬಳ್ಳಿಯ ಹೇಮಯ್ಯ ಶಾಸ್ತ್ರಿ ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಮಲಿಂಗಯ್ಯ ಗವಾಯಿ ಗೌಡಗಾಂವ್ ಹಾಗೂ ಸಿದ್ದಣ್ಣ ದೇಸಾಯಿ ಕಲ್ಲೂರ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಆ.29ರಂದು ಕುಂಭ ಮೇಳದೊಂದಿಗೆ ಪುರಾಣ ಸಮಾರೋಪ ಸಮಾರಂಭ ಜರುಗಲಿದೆ ಎಂದು ಗ್ರಾಮದ ಪರಮಾನಂದ ಸಂಗೊಂಡ ತಿಳಿಸಿದ್ದಾರೆ.
ಅಂಗವಿಕಲರ ಒಳಿತಿಗೆ ಮುಂದಾಗಿ
ರಾಯಚೂರು: ವಿಕಲಚೇತನ ಮಕ್ಕಳನ್ನು ದತ್ತು ಪಡೆದು ಪೋಷಿಸುವ ಮೂಲಕ ಅವರ ಒಳಿತಿಗೆ ಮುಂದಾಗುವಂತೆ ಶಾಸಕ ಡಾ. ಶಿವರಾಜ್ ಪಾಟೀಲ್ ಕರೆ ನೀಡಿದರು. ನಗರದಲ್ಲಿ ಸೋಮವಾರ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಭಾರತ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಸ್ಪೆಷಲ್ ಒಲಿಂಪಿಕ್ ಭಾರತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗಾಗಿನ ಜಿಲ್ಲಾ ಮಟ್ಟದ ಸ್ಟೆಷಲ್ ಒಲಿಂಪಿಕ್ಸ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಕಲಚೇತನರಿಗೆ ಸಮಾಜದಲ್ಲಿ ಅನುಕಂಪದ ಅವಶ್ಯಕತೆಯಿಲ್ಲ. ಸಮಾಜದಲ್ಲಿ ಸಹಾನುಭೂತಿಯ ಮೂಲಕ ಅಂಥವರ ಸಮಸ್ಯೆಗಳು ಹೆಚ್ಚುತ್ತಿವೆ. ದೇಶದಲ್ಲಿ ಶ್ರೀಮಂತಿಕೆಗೆ ಕೊರತೆಯಿಲ್ಲ. ಅಂಥವರ ವಿಚಾರದಲ್ಲಿ ಮಾನವೀಯತೆ ಮೆರೆದು ದತ್ತು ಪಡೆದು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು. ರಾಷ್ಟ್ರೀಯ ಕ್ರೀಡಾ ತರಬೇತಿಗಾರ್ತಿ ರತ್ನಾಶ್ಯಾಮ ಮಾತನಾಡಿದರು. ಮೂರು ವಿಭಾಗದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆದವು. ಜಿಲ್ಲೆಯ ಐದು ತಾಲೂಕಿನಿಂದ 10 ವರ್ಷ ಮೇಲ್ಪಟ್ಟ ಸುಮಾರು 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿದ್ದರು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಸರೋಜಮ್ಮ, ನಗರಸಭೆ ಹಂಗಾಮಿ ಅಧ್ಯಕ್ಷೆ ಪದ್ಮಾವತಿ, ಡಿಡಿಪಿಐ ರಾಮಾಂಜಿನೇಯ, ನಗರಸಭೆ ಸದಸ್ಯ ಜಯಣ್ಣ, ಪಿ.ಯಲ್ಲಪ್ಪ, ವಿನೋದ್ ಕುಮಾರ, ಸೈಯದ್ ಶೇಖ್, ಮಹ್ಮದ್ ಅಲಿ, ಕುಪ್ಪೇಂದ್ರ ಸೇರಿ ಅನೇಕರಿದ್ದರು.
ಅಭಿವೃದ್ಧಿಗೆ ಎಲ್ಲರ ಶ್ರಮ ಅಗತ್ಯ: ಶಾಸಕ
ದೇವದುರ್ಗ: ಚುನಾವಣೆ ಸಂದರ್ಭಕ್ಕೆ ಮಾತ್ರ ರಾಜಕೀಯ ಸೀಮಿತವಾಗಿದ್ದು, ತಾಲೂಕು ಮತ್ತು ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುವ ಅವಶ್ಯಕತೆಯಿದೆ ಎಂದು ಶಾಸಕ ಎ.ವೆಂಕಟೇಶ ನಾಯಕ ತಿಳಿಸಿದರು. ಪಟ್ಟಣದ ವಿವಿಧ ವಾರ್ಡುಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಪಟ್ಟಣದಲ್ಲಿ ನಡೆಯುವ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದಿಂದ ಕೈಗೊಳ್ಳಬೇಕು. ಸಾರ್ವಜನಿಕರು ಕೂಡ ತಮ್ಮ ವಾರ್ಡಿನಲ್ಲಿ ನಡೆಯುವ ಕಾಮಗಾರಿಗಳ ಮೇಲೆ ನಿಗಾಯಿರಿಸಲು ಸಲಹೆ ನೀಡಿದರು. ಪುರಸಭೆಯ 13ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ ವಾರ್‌ಡು ನಂ.8, 16 ಹಾಗೂ 19ರಲ್ಲಿ ಪೈಪಲೈನ್ ವಿಸ್ತರಣೆಗೆ 10 ಲಕ್ಷ, ಪಟ್ಟಣದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾವಲುಗಾರನ ಕೊಠಡಿಗೆ 9.50 ಲಕ್ಷ, ಕೆಇಬಿ ಕಾಲನಿ ಹತ್ತಿರ ಉದ್ಯಾನವನದ ತಂತಿ ಬೇಲಿ ನಿರ್ಮಾಣಕ್ಕೆ 7 ಲಕ್ಷ, 13ನೇ ಹನಕಾಸಿನ ಯೋಜನೆ ಅಡಿ ಸೋಮಕಾರ ದೊಡ್ಡಿಯಿಂದ ರಾಜೀವಗಾಂಧಿ ನಗರದ ರಸ್ತೆಗೆ 6 ಲಕ್ಷ ರು. ಅನುದಾದಲ್ಲಿ ಡಾಂಬರೀಕರಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸಯ್ಯ ಶಾಖೆ, ಫಜಲುಲ್ಲಾ ಸಾಜೀದ್, ಬಾಪೂಗೌಡ ಚಿಕ್ಕಹೊನ್ನಕುಣಿ, ಮಹಿಳಾ ಘಟಕದ ಅಧ್ಯಕ್ಷೆ ಕರೆಮ್ಮ, ಅಮೀನ್ ಬಾಷಾ, ಪುರಸಭೆ ಸದಸ್ಯರಾದ ವೆಂಕಟೇಶ ಮಕ್ತಲ್, ಶೆಟ್ಟಿ ಶಿವನಗೌಡ ಸೇರಿ ಅನೇಕರಿದ್ದರು.
ಪತ್ರಿಕೆಗಳು ಸಮಾಜಮುಖಿಆಗಿರಲಿ: ವಜ್ಜಲ್
ಮುದಗಲ್: ಪತ್ರಕರ್ತರಿಂದ ಸಮಾಜಕ್ಕೆ ಉತ್ತಮ ಸಂದೇಶ ಹೋಗಬೇಕೇ ವಿನಃ ಸುಳ್ಳು, ವೈಯಕ್ತಿಕ ದ್ವೇಷದ ತಪ್ಪು ಸಂದೇಶ ಹೋಗಬಾರದು ಎಂದು ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ರಾಜಕೀಯದಿಂದ ದೂರ ಉಳಿದಲ್ಲಿ ಪತ್ರಕರ್ತನ ಸತ್ಯ, ನಿಷ್ಠೆಯ ಕರ್ತವ್ಯಕ್ಕೆ ಕಾರಣವಾಗಲಿದೆ ಎಂದು ಕಿವಿಮಾತು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಿ. ವೆಂಕಟಸಿಂಗ್, ಜಿಲ್ಲಾ ಉಪಾಧ್ಯಕ್ಷ ಅಜೀಜಸಾಬ ಮಸ್ಕಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಕಲಿಮಠದ ಫಕೀರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಅಧ್ಯಕ್ಷ ಪಂಪಯ್ಯ ಮಠ ಅಧ್ಯಕ್ಷತೆ ವಹಿಸಿದ್ದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಪತ್ರಕರ್ತರ ಸಂಘದ ಜಿಲಾಧ್ಯಕ್ಷ ಚೆನ್ನಬಸವಣ್ಣ, ಎಪಿಎಂಸಿ ಅಧ್ಯಕ್ಷ ಚೆನ್ನವೀರಪ್ಪಗೌಡ ಪಾಗದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಾ. ಅಯ್ಯಪ್ಪ, ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತಕುಮಾರ ನಾಗಲಾಪುರ ಇದ್ದರು. ಪತ್ರಕರ್ತರಾದ ಸೋಮಣ್ಣ ಗುರಿಕಾರ, ದೇವಣ್ಣ ಕೋಡಿಹಾಳ, ನಾಗರಾಜ ಮಸ್ಕಿ, ಪತ್ರಿಕಾ ವಿತರಕ ಮೌನೇಶ ಹಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ಘನಮಠದಯ್ಯ ನಿರೂಪಿಸಿದರು.
ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿ: ಪಾಟೀಲ
ಮುದಗಲ್: ಪತ್ರಿಕಾ ರಂಗವು ಅತ್ಯಂತ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಿಕೆಗಳ ಹಾಗೂ ಪತ್ರಕರ್ತರ ಸೇವೆ ಶ್ಲಾಘನೀಯ. ಆದರೆ ಪತ್ರಕರ್ತರು ವಸ್ತುನಿಷ್ಠ, ಸತ್ಯನಿಷ್ಠೆಯ ವರದಿಗೆ ಆದ್ಯತೆ ನೀಡಬೇಕೆಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಸಲಹೆ ನೀಡಿದರು. ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳು ತಪ್ಪು ಮಾಡಿರುವದನ್ನು ಪತ್ರಕರ್ತರು ವರದಿ ಮೂಲಕ ಎಚ್ಚರಿಸುತ್ತಿದ್ದಾರೆ ಎಂದರು.
ಲಕ್ಷ್ಮಮ್ಮ ಬರಸಿ
ಸಿಂಧನೂರು: ನಗರದ ಸಾಧನ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ ಬರಸಿ ವಕೀಲರ ತಾಯಿ ಲಕ್ಷ್ಮಮ್ಮ ಬಸಪ್ಪ ಬರಸಿ(90) ಭಾನುವಾರ ನಿಧನರಾದರು. ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆಯಿತು.
ಕಟ್ಟೆಪ್ಪ ಗುಂಜಳ್ಳಿ
ಸಿಂಧನೂರು: ಕುರುಬ ಸಮಾಜದ ಮುಖಂಡ, ಗುತ್ತೇದಾರ ಕಟ್ಟೆಪ್ಪ ಗುಂಜಳ್ಳಿ (48) ಭಾನುವಾರ ರಾತ್ರಿ 10.30ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ಸುಕಾಲಪೇಟೆಯ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಭೀಮಣ್ಣ ಸಂಗಟಿ, ಟಿ.ಹನುಮಂತಪ್ಪ ಇತತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಯೋಗ, ಕ್ರೀಡೆಯಿಂದ ಉತ್ತಮ ಆರೋಗ್ಯ
ಲಿಂಗಸ್ಗೂರು: ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ತಾಲೂಕು ದೈಹಿಕ ಪರಿವೀಕ್ಷಕ ಮುಕ್ಕಣ್ಣ ಹೇಳಿದರು. ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶಿಕ್ಷಣ ಇಲಾಖೆ ಮತ್ತು ಬಸಮ್ಮ ಗುರುಲಿಂಗಪ್ಪ ಸ್ಮಾರಕ ಪ್ರೌಢ ಶಾಲೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮನಸ್ಸು ಸ್ಥಿರವಾಗಿರಬೇಕಾದರೆ ಯೋಗ, ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಶಿಸ್ತು, ಸಂಯಮ, ತಾಳ್ಮೆ ಇರಬೇಕು. ಸೋಲು- ಗೆಲವು ಸಹಜವಾಗಿ ಸ್ವೀಕರಿಸಿ ನಿರ್ಣಾಯಕರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ, ದೈಹಿಕ ಶಿಕ್ಷಕರಾದ ಗುರುಸಂಗಯ್ಯ ಗಣಾಚಾರಿ, ಶಿವಾನಂದ ನರಹಟ್ಟಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಜೀವ ಕುಮಾರ ಸೇರಿದಂತೆ ಇದ್ದರು.