ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಆ.5
ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಸತತ ಮೂರನೇ ದಿನವೂ ಮುಂದುವರಿದಿದ್ದು, ಆತಂಕ ದೂರವಾಗಿಲ್ಲ. ಆದರೆ ಕೃಷ್ಣಾ ನದಿಯಲ್ಲಿ ಹರಿವು ತಗ್ಗುವ ಮೂಲಕ ಉಂಟಾಗಿದ್ದ ಆತಂಕ ದೂರವಾಗಿದೆ.
ತುಂಗಭದ್ರಾ ನದಿಯಲ್ಲಿ ಸದ್ಯ ಲಕ್ಷಾಂತರ ಕ್ಯುಸೆಕ್ ನೀರು ಹೊರಹರಿಸಲಾಗುತ್ತಿದ್ದು ಅದರಿಂದ ಮಂತ್ರಾಲಯ ಸೇರಿದಂತೆ ರಾಯಚೂರು ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅದೇ ವೇಳೆ ಕಳೆದ ಎರಡು ದಿನಗಳಿಂದ ಉಕ್ಕಿ ಹರಿಯುತ್ತಿದ್ದ ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆಯಾಗಿದೆ.
1.44 ಲಕ್ಷ ಕ್ಯುಸೆಕ್ ಒಳಹರಿವು: ತುಂಗಭದ್ರಾ ನದಿಯಲ್ಲಿ ಮಂಗಳವಾರ 1.83 ಲಕ್ಷ ಕ್ಯುಸೆಕ್ ನೀರಿನ ಹೊರಹರಿವಿದೆ. ಕೊಪ್ಪಳ ಬಳಿಯ ಮುನಿರಾಬಾದ್‌ನ ತುಂಗಭದ್ರಾ ಜಲಾಶಯಕ್ಕೆ 1.44 ಲಕ್ಷ ಕ್ಯುಸೆಕ್ ನೀರಿನ ಒಳಹರಿವಿದ್ದು, ಶಿವಮೊಗ್ಗ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಒಳಹರಿವು ಹೆಚ್ಚಳ ಕಾಣುವ ಸಾಧ್ಯತೆಯಿದೆ.
ಈ ಮಧ್ಯೆ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ನದಿಗೆ ಹರಿಬಿಡಲಾಗುತ್ತಿದ್ದ ನೀರಿನ ಪ್ರಮಾಣ ಕೊಂಚ ತಗ್ಗಿಸಲಾಗಿದೆ. ಪರಿಣಾಮ ನದಿ ತೀರದ ಗ್ರಾಮಗಳಲ್ಲಿ ಕೊಂಚಮಟ್ಟಿಗಿನ ನಿರಾಳತೆ ಮೂಡಿದೆ. ಲಿಂಗಸ್ಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿನ ಗದ್ದೆಗಳಿಗೆ ನುಗ್ಗಿದ್ದ ನೀರು ಅಲ್ಪ ಇಳಿಕೆ ಕಂಡಿದೆ.
ಕೃಷ್ಣಾ ಪ್ರವಾಹ ಇಳಿಕೆ: ನಾರಾಯಣಪುರ ಜಲಾಶಯದಿಂದ ನದಿಗೆ ಕಳೆದ ಎರಡು ದಿನಗಳಿಂದ 1.60 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿಸಲಾಗುತ್ತಿತ್ತು. ಆದರೆ ಮಂಗಳವಾರ ಈ ಪ್ರಮಾಣ 1.31 ಲಕ್ಷ ಕ್ಯುಸೆಕ್‌ಗೆ ತಗ್ಗಿಸಿದ್ದು ಪ್ರವಾಹ ಇಳಿಕೆಯಾಗಿದೆ.ತುಂಗಭದ್ರಾ ನದಿ ತೀರದ ಸಿಂಧನೂರು ತಾಲೂಕಿನ ಧಡೇಸೂಗೂರು, ಕೆಂಗಲ್ ಮತ್ತಿತರೆಡೆ ನದಿಯ ಪ್ರವಾಹಕ್ಕೆ 100ಕ್ಕೂ ಹೆಚ್ಚಿನ ನೀರೆತ್ತುವ ಮೋಟಾರ್‌ಗಳು ನೀರಿನಲ್ಲಿ ಮುಳುಗಿದ್ದು ರೈತರು ಆತಂಕಕ್ಕೆ ಸಿಲುಕಿದ್ದಾರೆ. ಅದೇ ರೀತಿ ಗದ್ದೆಗಳಿಗೆ ನೀರು ನುಗ್ಗಿದ್ದು, ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಬತ್ತ ನೀರಿನಲ್ಲಿ ಮುಳುಗಿದೆ. ರೈತರನ್ನು ಆತಂಕಕ್ಕೆ ನೂಕಿದೆ.