ಸಿಂಧನೂರು: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ ಹೆಚ್ಚುವರಿ ನೀರು ಬಿಟ್ಟಿದ್ದರಿಂದ ತಾಲೂಕಿನ ಹಲವು ಗ್ರಾಮಗಳು ನದಿಪಾತ್ರದಲ್ಲಿರುವುದನ್ನು ಗಮನಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಂ. ಗಂಗಪ್ಪ ಕಲ್ಲೂರು ಹೇಳಿದರು. ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪ್ರಸ್ತುತ ತುಂಗಭದ್ರಾ ನದಿಗೆ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ರೈತರ ಹೊಲಗಳಿಗೆ ನೀರು ನುಗ್ಗಿರುವುದು, ಪಂಪ್‌ಸೆಟ್‌ಗಳು ಹರಿದು ಹೋಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ನದಿಗೆ 3 ಲಕ್ಷ ಕ್ಯುಸೆಕ್ ನೀರು ಹರಿಬಿಡುವ ಮುನ್ಸೂಚನೆ ಜಲಾಶಯದ ಅಧಿಕಾರಿಗಳು ಹೇಳಿರುವ ಕಾರಣ ನದಿಪಾತ್ರದಲ್ಲಿ ಬರುವ ತಾಲೂಕಿನ ಸಾಲಗುಂದಾ, ಹುಡಾ, ಬಾದರ್ಲಿ ಮತ್ತು ಹೆಡಗಿನಾಳ ಹೋಬಳಿ ವ್ಯಾಪ್ತಿಯ 14 ಹಳ್ಳಿಗಳಲ್ಲಿ ಈಗಾಗಲೇ ಢಂಗೂರ ಸಾರಲಾಗಿದೆ. ದನಕರುಗಳನ್ನು ನದಿ ಹತ್ತಿರ ಬಿಡದಂತೆ, ಪಂಪ್‌ಸೆಟ್‌ಗಳು ಸೇರಿದಂತೆ ಹೊಲಗಳಲ್ಲಿನ ಬೆಲೆಬಾಳುವ ಉಪಕರಣಗಳನ್ನು ಅಲ್ಲಿಂದ ತೆರವುಗೊಳಿಸುವಂತೆ, ನದಿ ಹತ್ತಿರ ಯಾರೂ ಹೋಗದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಿದ್ಧತೆ: ಇನ್ನು ಅಪಾಯ ಮಟ್ಟ ಮೀರಿ ನೀರು ಹರಿಯುವುದರಿಂದ ಸುಮಾರು 40 ಕುಟುಂಬಗಳು ತೊಂದರೆಗೀಡಾಗುವ ಸಂಭವಗಳಿದ್ದು, ಇದನ್ನು ನಿಭಾಯಿಸುವ ಸಲುವಾಗಿ ದಢೇಸುಗೂರು, ಕೆಂಗಲ್, ಸಿಂಗಾಪುರ, ಗಿಣಿವಾರ, ವಳಬಳ್ಳಾರಿ, ಉಪ್ಪಳ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಗಂಜಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಶಾಲೆಗಳ ಕೀಲಿಕೈಗಳನ್ನು ಪಡೆದುಕೊಳ್ಳಲಾಗಿದ್ದು ಗ್ರಾಮಸ್ಥರು ಭೀತಿಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.