ರಾಯಚೂರು: ನಗರಕ್ಕೆ ನೀರು ಪೂರೈಸುವ ರಾಂಪುರ ಜಲಾಶಯಕ್ಕೆ ನೀರು ತುಂಬಿಕೊಳ್ಳಲು ಗಣೇಕಲ್ ಜಲಾಶಯದ ಭರ್ತಿ ಕಾರ್ಯಕ್ಕೆ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ನೀರು ಹರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಗರಕ್ಕೆ ಸಮರ್ಪಕ ಕುಡಿಯುವ ನೀರೊದಗಿಸಲು ತುಂಗಭದ್ರಾ ಎಡದಂಡೆ ಕಾಲುವೆಯಿಂದ ಗಣೇಕಲ್ ಸಮತೋಲನಾ ಜಲಾಶಯಕ್ಕೆ ನೀರಿನ ಸಾಗಣೆಗೆ ಕಾಲುವೆಯ ಮೈಲ್ 47ರಿಂದ 104ರವರೆಗೆ ಮುಖ್ಯ ಕಾಲುವೆಯ ಪ್ರದೇಶದಲ್ಲಿ ನೀರನ್ನು ರೈತರು ಕೃಷಿಗೆ ಬಳಸದಂತೆ ತಡೆಯಬೇಕಿದೆ ಎಂದು ತಿಳಿಸಿದ್ದಾರೆ. ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿಗಾಗಿ ಮುಖ್ಯ ಕಾಲುವೆಗಳ ಮೂಲಕ ಗಣೇಕಲ್‌ಗೆ ಭರ್ತಿ ಮಾಡಿಕೊಳ್ಳಲು ಆ.16ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಸಂದರ್ಭ ತುಂಗಭದ್ರಾ ಎಡದಂಡೆ ಕಾಲುವೆ ಮೈಲ್ 47ರಿಂದ 104ರವರೆಗಿನ ಪ್ರದೇಶದಲ್ಲಿ ಸಂಬಂಧಿಸಿದ ನೀರಾವರಿ ಅಧಿಕಾರಿಗಳು ಮಾತ್ರ ತೂಬು ತೆರೆಯತಕ್ಕದ್ದು. ಬೇರೆಯವರು ತೂಬು ತೆರೆಯುವುದು, ಮುಚ್ಚುವುದು ನಿಷೇಧಿಸಲಾಗಿದೆ ಎಂದು ಎಚ್ಚರಿಸಿದ್ದಾರೆ.
ಎಚ್ಚರಿಕೆ: ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗುತ್ತದೆ. ಕಾರಣ ನದಿ ತೀರದವರು ಎಚ್ಚರಿಕೆಯಿಂದಿರಲು ತುಂಗಭದ್ರಾ ಡ್ಯಾಂ ಇಇ ಕಚೇರಿ ಮನವಿ ಮಾಡಿದೆ.