ಮುದಗಲ್: ಶಾಲಾ ಬಾಲಕನಿಗೆ ಚಾಕು ತೋರಿಸಿ ಅಪಹರಿಸಲು ದುಷ್ಕರ್ಮಿಗಳು ನಡೆಸಿದ ಯತ್ನ ವಿಫಲವಾದ ಘಟನೆ ಸೋಮವಾರ ಮತ್ತೆ ಖೈರವಾಡಗಿ ಸಮೀಪ ನಡೆದಿದೆ.
ಅಡವಿಭಾವಿ ಗ್ರಾಮದಿಂದ ಖೈರವಾಡಗಿ ಪ್ರೌಢಶಾಲೆಗೆ 9ನೇ ತರಗತಿ ವಿದ್ಯಾರ್ಥಿ ಅಶೋಕ ಸೈಕಲ್ ಮೇಲೆ ತೆರಳುತ್ತಿದ್ದಾಗ ಕಾರಿನಲ್ಲಿದ್ದ ಮುಸುಕುದಾರಿಗಳು ಮಾತನಾಡಿಸಿ ಕಾರಿನೊಳಗೆ ಬರುವಂತೆ ಕೇಳಿದ್ದಾರೆ. ಅದಕ್ಕೆ ಆಕ್ಷೇಪಿಸಿದ ವಿದ್ಯಾರ್ಥಿಗೆ ಚಾಕು ತೋರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.
ಅಪರಿಚಿತ ವಾಹನದಲ್ಲಿ ಮೂವರಿದ್ದು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದರು. ಅವರು ಚಾಕು ತೋರಿಸಿದ್ದರಿಂದ ಹೆದರಿ ಸೈಕಲ್ ವೇಗವಾಗಿ ಚಲಿಸಿ ಮುಂದೆ ಬಂದೆ. ಹಿಂದೆ ಬರುತ್ತಿದ್ದ ವಾಹನಕ್ಕೆ ಕೆಳಗೆ ಕಲ್ಲು ಬಡಿದಿದ್ದರಿಂದ ಹಿಂದುಳಿಯಿತು ಎಂದು ವಿದ್ಯಾರ್ಥಿ ಶಾಲೆಯ ಮುಖ್ಯಗುರುಗಳಿಗೆ ಮತ್ತು ಶಿಕ್ಷಕರಿಗೆ ತಿಳಿಸಿದ್ದಾನೆ.
ವಿಷಯ ತಿಳಿದ ಶಿಕ್ಷಕರು, ಗ್ರಾಮಸ್ಥರು ವಾಹನವನ್ನು ಹುಡುಕಾಡಿದ್ದಾರೆ. ಆದರೆ ರಸ್ತೆಯಲ್ಲಿ ಕಾರಿನ ಚಕ್ರದ ಹೆಜ್ಜೆ ಗುರುತುಗಳು ಮಾತ್ರ ಪತ್ತೆಯಾಗಿದ್ದು ವಾಹನ ಅಲ್ಲಿಂದ ಪಾರಾಗಿತ್ತು ಎಂದು ಮುಖ್ಯ ಗುರುಗಳು ತಿಳಿಸಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ: ಇತ್ತೀಚೆಗೆ ಸಮೀಪದ ಆಶಿಹಾಳ ತಾಂಡಾದಲ್ಲಿ ಅಪಹಹರಣಕ್ಕೆ ಒಳಗಾಗಿದ್ದ ವ್ಯಕ್ತಿ ಚಿತ್ರದುರ್ಗ ಸಮೀಪ ತಪ್ಪಿಸಿಕೊಂಡು ಬಂದಿರುವ ಘಟನೆ ಮಾಸುತ್ತಿದ್ದಂತೆ ಇದೇ ಗ್ರಾಮದ ಸಮೀಪದ ಆಡವಿಭಾವಿ ಗ್ರಾಮದ ವಿದ್ಯಾರ್ಥಿ ಯನ್ನು ಅಪಹರಿಸಲು ಯತ್ನಿಸಿರುವ ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಆಶಿಹಾಳ, ಅಡವಿಭಾವಿ ಮೂಲಕ ಬಸ್ ಸೌಲಭ್ಯವಿಲ್ಲದ ಕಾರಣ ಆಂತರಿಕ ರಸ್ತೆಯಿಂದಲೇ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲೇ ಶಾಲೆಗೆ ತೆರಳುವುದು ಅನಿವಾರ್ಯವಾಗಿದೆ. ಈ ಅಪಹರಣ ಯತ್ನ ಘಟನೆ ಕುರಿತು ಮುದಗಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸುವುದಾಗಿ ಶಾಲೆಯ ಮುಖ್ಯಾಧಿಕಾರಿ ಮೌನೇಶ ಬಡಿಗೇರ ತಿಳಿಸಿದ್ದಾರೆ.