ರಾಯಚೂರು: ನಗರದ ಸಫಾಯಿ ಕರ್ಮಚಾರಿಗಳ ರುದ್ರಭೂಮಿ ಅತಿಕ್ರಮಿಸಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಾತಾ ಮಹಾಕಾಳಿ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಈ ಕುರಿತು ಬುಧವಾರ ಗೃಹ ಸಚಿವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿ, ಸಫಾಯಿ ಕರ್ಮಚಾರಿ ಸಮಾಜದವರಿಗೆ ಮೀಸಲಿಟ್ಟ ರುದ್ರಭೂಮಿ ಜಾಗ ಅತಿಕ್ರಮಿಸಿಕೊಂಡ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಸಮಾಜದಲ್ಲಿ ಹಿಂದುಳಿದ ಸಫಾಯಿ ಕರ್ಮಚಾರಿ ಸಮುದಾಯ ಅಭಿವೃದ್ಧಿಗೆ 2011-12ನೇ ಸಾಲಿನಲ್ಲಿ ಸರ್ಕಾರ 300್ಗ200 ಅಡಿ ಸರ್ಕಾರ ಗೈರಾಣಿ ಭೂಮಿಯನ್ನು ರುದ್ರಭೂಮಿಗೆ ನೀಡಿತ್ತು. ಸಮಾಜದ ಆರ್ಥಿಕ ಸಂಕಷ್ಟದಿಂದ ಜಾಗಕ್ಕೆ ರಕ್ಷಣೆ ಗೋಡೆ ನಿರ್ಮಿಸಲು ಸಾಧ್ಯವಾಗಿಲ್ಲ. ಅದರಿಂದಾಗಿ ಸದ್ಯ ಆ ಜಾಗವನ್ನು ಕೆಲವರು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದ್ದಾರೆಂದು ದೂರಿದರು.
ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ರುದ್ರಭೂಮಿ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಿಸಲು ಅನುದಾನ ನೀಡುವಂತೆ ಹಿಂದಿನ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ್ದ ಆಗಿನ ಜಿಲ್ಲಾಧಿಕಾರಿಯು 5 ಲಕ್ಷ ಅನುದಾನ ಒದಗಿಸಿದ್ದರು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಅನುದಾನ ಸಮರ್ಪಕ ದೊರೆಯದೆ ಆವರಣ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಅದರಿಂದ ಅತಿಕ್ರಮಣಕಾರರಿಗೆ ಅನುಕೂಲವಾಗಿದೆ ಎಂದು ಆರೋಪಿಸಿದರು. ಕೂಡಲೇ ಸಫಾಯಿ ಕರ್ಮಚಾರಿ ಸಮುದಾಯದ ಹಿತದೃಷ್ಟಿಯಿಂದ ರುದ್ರಭೂಮಿ ಅತಿಕ್ರಮಿಸಿಕೊಂಡವರ ಮೇಲೆ ಕಠಿಣ ಕ್ರಮ ಕೈಗೊಂಡು, ಜಾಗ ರಕ್ಷಣೆ ಮಾಡಬೇಕು. ತಕ್ಷಣವೇ ಸದರಿ ಜಾಗಕ್ಕೆ ರಕ್ಷಣಾಗೋಡೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜೇಶ್, ರಮೇಶ ಸಿಂಗ್ ಸೇರಿ ಅನೇಕರಿದ್ದರು.