ರಾಯಚೂರು: ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ಮತ್ತು ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ(ಸಿಐಎಲ್ಸಿ)ದ ಶಿಫಾರಸುಗಳ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಾಪಂ ಇಒ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಬಿಸಿಯೂಟ ಯೋಜನೆ ಅಡಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕನಿಷ್ಠ ಸೌಲಭ್ಯಗಳಲ್ಲಿಯೇ ಜೀವನ ನಡೆಸುತ್ತಿದ್ದಾರೆಂದು ದೂರಿದರು.
ಖಾಸಗೀಕರಣಕ್ಕೆ ಒಪ್ಪಿಗೆ ಬೇಡ: ಕಡಿಮೆ ವೇತನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕುಟುಂಬದವರು ಆರ್ಥಿಕ ಸಂಕಷ್ಟದಲ್ಲಿಯೇ ಬದುಕು ಕಳೆಯುವಂತಾಗಿದೆ. ಕಾರಣ ಕೂಡಲೇ 2013ರ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದಂತೆ 500 ಹೆಚ್ಚುವರಿ ಗೌರವಧನ ನೀಡಬೇಕು. ಅದೇ ರೀತಿ ಕೇಂದ್ರ ಸರ್ಕಾರ ಸಹ ಹೆಚ್ಚುವರಿಯಾಗಿ 1 ಸಾವಿರ ಗೌರವಧನ ಪಾವತಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
2013ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಶಿಫಾರಸುಗಳ ಜಾರಿಗೆ ಸರ್ಕಾರಗಳು ಕೂಡಲೇ ಮುಂದಾಗಬೇಕು. ಬಿಸಿಯೂಟ ಯೋಜನೆಯನ್ನು ಇಲ್ಲಸಲ್ಲದ ಕಾರಣವೊಡ್ಡಿ ಖಾಸಗೀಕರಣಕ್ಕೆ ಒಪ್ಪಿಸಬಾರದು ಎಂದು ಆಗ್ರಹಿಸಿದರು.
ನಿಯಮಾವಳಿ ರೂಪಿಸಿ: ಈಗಾಗಲೇ ಸರ್ಕಾರವು ಬಿಸಿಯೂಟದಲ್ಲಿ ಖಾಸಗೀಕರಣಕ್ಕೆ ಹಲವೆಡೆ ಅವಕಾಶ ಕಲ್ಪಿಸಿದ್ದರಿಂದ 40 ಸಾವಿರ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಇಸ್ಕಾನ್ನಂಥ ಸಂಸ್ಥೆಗಳು ಬಿಸಿಯೂಟ ಒದಗಿಸುವುದಾಗಿ ಹೇಳುತ್ತಲೇ ಸರ್ಕಾರ ಮತ್ತು ಹೊರದೇಶದ ಸಂಘ-ಸಂಸ್ಥೆಗಳಿಂದಲೂ ಹಣ ಪಡೆದು ಯೋಜನೆ ವ್ಯಾಪಾರೀಕರಣಗೊಳಿಸಿವೆ ಎಂದು ದೂರಿದರು. ರಾಜ್ಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ 93 ಸಂಸ್ಥೆಗಳು ಸರ್ಕಾರದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿಲ್ಲ. ಕಾರಣ ಕೂಡಲೇ ಅಂಥ ಸಂಸ್ಥೆಗಳಿಂದ ಬಿಸಿಯೂಟ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ ಹೋರಾಟಗಾರರು ಬಿಸಿಯೂಟ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿ ನಿಯಮಾವಳಿ ರೂಪಿಸಬೇಕು. ಅಗತ್ಯ ಸೇವಾ ಸೌಲಭ್ಯಗಳನ್ನು ಕೊಡಬೇಕು. ಕ್ಲಸ್ಟರ್ ಮಟ್ಟದಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.
ಅಡುಗೆಯವರನ್ನೂ ವರ್ಗಾಯಿಸಿ: ಕಳೆದ 11 ವರ್ಷಗಳಿಂದ ಹಾಜರಾತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯದಂತೆ ಆದೇಶ ಹೊರಡಿಸಬೇಕು. ದಾಖಲಾತಿ ಆಧಾರದಲ್ಲಿ ಶಾಲೆಗಳನ್ನು ವಿಲೀನಗೊಳಿಸುವ ವೇಳೆ ನಡೆಸುವ ಶಿಕ್ಷಕರ ವರ್ಗಾವಣೆಯಂತೆ ಅಡುಗೆಯವರನ್ನೂ ವರ್ಗಾಯಿಸಲು ಒತ್ತಾಯಿಸಿದರು.
ಶಿಕ್ಷಕರ ಮೇಲಿನ ಬಿಸಿಯೂಟದ ಹೊಣೆ ಕಡಿಮೆಗೊಳಿಸಲು ಸರ್ಕಾರ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಬೇಕು. ಸಾಮಾಜಿಕ ಭದ್ರತೆಯ ಅಂಗವಾಗಿ ಕೇಂದ್ರ ಸರ್ಕಾರದ ಜನಶ್ರೀ ವಿಮಾ ಯೋಜನೆ ಜಾರಿ ಮಾಡಬೇಕು. ಪ್ರತಿ ತಿಂಗಳು ವೇತನ ಸಮರ್ಪಕ ಪಾವತಿಗೆ ಕ್ರಮ ಕೈಗೊಳ್ಳಬೇಕೆಂಬುದು ಸೇರಿ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಸರ್ಕಾರ ಮುಂದಾಗುವಂತೆ ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಎಚ್. ಪದ್ಮಾ, ಕೆ.ಜಿ. ವೀರೇಶ್, ಶರಣಬಸವ, ನಾಗೇಂದ್ರ, ರವಿ ಪೂಜಾರಿ, ಸಂಘಟನೆಯ ಅಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಮಹಾದೇವಿ, ಖಜಾಂಚಿ ಕಲ್ಯಾಣಿ ಸೇರಿದಂತೆ ಅನೇಕರಿದ್ದರು.