ಮುದಗಲ್: ಮುಸ್ಲಿಮರ ಪವಿತ್ರ ರಂಜಾನ್ ಮಹತ್ವ ಪಡೆದಿದ್ದು, 30 ದಿನಗಳ ಉಪವಾಸ ಆಚರಣೆ ಕಡ್ಡಾಯವಾಗಿದೆ. ಇದರಿಂದ ಮಾನಸಿಕ ಸ್ಥಿಮಿತ, ಇಂದ್ರೀಯಗಳ ಹಿಡಿತದಿಂದ ಚಾರಿತ್ರ್ಯವನ್ನು ಬದಲಾಯಿಸಿಕೊಳ್ಳಬೇಕಿದೆ ಎಂದು ಪ್ರವಚನಕಾರ ಲಾಲ್ ಹುಸೇನ್ಸಾಬ ಕಂದಗಲ್ ಅಭಿಪ್ರಾಯಪಟ್ಟರು.
ಸ್ಥಳೀಯ ನೂರ್ ಎ ಇಲಾಹಿ ಮಸ್ಜೀದ್ನಲ್ಲಿ ಜಮಾಅತೆ ಇಸ್ಲಾಮಿ-ಹಿಂದ್ನವರು ಹಮ್ಮಿಕೊಂಡ ಇಫ್ತಾರ್ ಸೌಹಾರ್ದ ಕೂಟದ ಸಮಾರಂಭದಲ್ಲಿ ಮಾತನಾಡಿ, ಉಪವಾಸ ವ್ರತಗಳು ಎಲ್ಲ ಧರ್ಮಗಳಲ್ಲಿ ಆಚರಿಸಲ್ಪಡುತ್ತಿವೆ. ಇವುಗಳಿಂದ ದಿಟ್ಟತೆ, ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದರು.
ಉಪವಾಸದ ಮೂಲಕ ದೇವರ ನಾಮ ಸ್ಮರಣೆಗೆ ದಾರಿ ದೀಪವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಮಾನವ ಇಂದ್ರೀಯಗಳ ದಾಸನಾಗುತ್ತಿದ್ದಾನೆ. ಆದ್ದರಿಂದಲೇ ಇಂದು ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇದು ಖಂಡನೀಯ. ಇಂದ್ರೀಯಗಳ ಹಿಡಿತ ಸಾಧಿಸಿ ನಮ್ಮ ಚಾರಿತ್ರ್ಯವನ್ನು ಸುಧಾರಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಉಪವಾಸ ವೃತದಿಂದ ಆರೋಗ್ಯ: ಸರ್ವಧರ್ಮಗಳಲ್ಲಿ ಅಳವಡಿಕೆಯಾಗಿರುವ ಉಪವಾಸ ವ್ರತಗಳು ಆಚರಣೆ ರೀತಿಯಲ್ಲಿ ಭಿನ್ನವಾಗಿವೆ. ವೈದ್ಯಕೀಯವಾಗಿ ಹೇಳಬೇಕಾದರೆ ಉಪವಾಸ ವ್ರತದಿಂದ ಮಾನವನ ದೇಹದಲ್ಲಿನ ಕೊಬ್ಬಿನಾಂಶ, ಪಿತ್ತ ಹತೋಟಿಗೆ ಬರುವ ಮೂಲಕ ದೇಹದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರ ತಜ್ಞ ವೈದ್ಯ ಡಾ. ಈಶ್ವರ ಸವಡಿ ಹೇಳಿದರು.
ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಹಿಂದೂಗಳಿಗೆ ಶ್ರಾವಣ ಮಾಸ, ಮುಸ್ಲಿಮರಿಗೆ ರಂಜಾನ್ ತಿಂಗಳು ಅತ್ಯಂತ ಪಾವಿತ್ರ್ಯವಾಗಿವೆ. ಆದರೆ ಆಚರಣೆಯಲ್ಲಿ ವಿಭಿನ್ನವಾಗಿದ್ದರೂ ಎರಡೂ ಧರ್ಮಗಳ ಲ್ಲಿಯ ಉಪವಾಸ ವ್ರತಗಳು ಭಗವಂತನ ನಾಮಸ್ಮರಣೆಯ ಪ್ರತಿರೂಪಗಳಾಗಿವೆ. ಭಗವಂತನ ಆಚರಣೆಗೆ ನಮ್ಮ ಆತ್ಮವೇ ಸಾಕ್ಷಿಯಾಗುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ನೀಲಕಂಠಪ್ಪ ಸುಂಕದ, ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ಜೆಡಿಎಸ್ ತಾಲೂಕಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಎಪಿಎಂಸಿ ನಿರ್ದೇಶಕ ಎಸ್.ಆರ್. ರಸೂಲ್, ತಾಪಂ ಸದಸ್ಯ ಗುಂಡಪ್ಪ ಸಾಹುಕಾರ, ಪಪಂ ಸದಸ್ಯರಾದ ಖಾಜಾಹುಸೇನ್, ಮಹ್ಮದ್ ಮಾಸೂಮ್ ಷರೀಫ್, ಬಂದೇನವಾಜ್, ಜನಾಬ್ ಮೌಲಾನಾ ಮಹೆಬೂಬ್ ಪಾಷಾ ಉಮರಿ ಸೇರಿದಂತೆ ಮತ್ತಿತರರಿದ್ದರು.