ಮುದಗಲ್: ಮಂಗಳವಾರ ಜರುಗುವ ಮುಸ್ಲಿಂಮರ ಪವಿತ್ರ ರಂಜಾನ್ ಹಬ್ಬದಲ್ಲಿ ಶಾಂತಿ ಕಾಪಾಡುವಂತೆ ಪೊಲೀಸ್ ಉಪ ವಿಭಾಗಾಧಿಕಾರಿ ಅನಿತಾ ಹದ್ದಣ್ಣವರ ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಕರೆಯಲಾಗಿದ್ದ ರಂಜಾನ್ ಹಬ್ಬದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮುದಗಲ್ ಪಟ್ಟಣ ಹಿಂದೂ-ಮುಸ್ಲಿಂಮರ ಭಾವೈಕ್ಯತೆಗೆ ಹೆಸರಾಗಿದ್ದು ಹಬ್ಬದಲ್ಲಿ ಪರಸ್ಪರರು ಸಹಕಾರ ನೀಡಿ ಯಾವುದೇ ಅಹಿತಕರ ಘಟನೆ ಜರಗದಂತೆ ಶಾಂತಿಯುತವಾಗಿ ಹಬ್ಬ ಆಚರಿಸಲು ತಿಳಿಸಿದರು.
ಮಹಾಂತೇಶ ಪಾಟೀಲ್ ಮಾತನಾಡಿ, ಹಬ್ಬ ಹತ್ತಿರ ಬಂದಿದ್ದು ವಿದ್ಯುತ್ ಕಡಿತಗೊಳಿಸದಂತೆ ಜೆಸ್ಕಾಂ ಇಲಾಖೆಗೆ ತಿಳಿಸಬೇಕು. ಭಾನುವಾರ ಮತ್ತು ಸೋಮವಾರ ಸಂತೆಯ ದಿನವಾಗಿದಲ್ಲದೇ ಮಂಗಳವಾರ ರಂಜಾನ್ ಹಬ್ಬ ಜರುಗುವುದರಿಂದ ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಾಹನದ ನಿಲುಗಡೆ, ಟ್ರಾಫಿಕ್ ಜಾಮ್ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಠಾಣಾ ಪಿಎಸೈ ಸಂಗಮೇಶ ಶಿವಯೋಗಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ, ಮುಖಂಡರಾದ ಗುರುಬಸಪ್ಪ ಸಜ್ಜನ, ಮಹಾಂತೇಶ ಪಾಟೀಲ್ ಮಾತನಾಡಿದರು.
ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಹಳೇಪೇಟ್, ಸಿಪಿಐ ಸತ್ಯನಾರಾಯಣ, ಪಪಂ ಸದಸ್ಯ ಶಿವರಾಜ ತಳವಾರ, ಎಪಿಎಂಸಿ ನಿರ್ದೇಶಕ ಎಸ್.ಆರ್. ರಸೂಲ್, ಮುಖಂಡರಾದ ಮುನ್ವರಖಾನ್, ಡಾ. ಬಸವರಾಜ, ಅಮೀರ್ ಬೇಗ್ ಉಸ್ತಾದ್, ರಾಮಣ್ಣ ಹಿರೇಮನಿ, ಹನುಮಂತಪ್ಪ ಮೇಗಳಪೇಟೆ, ರಾಜಣ್ಣ ದಳಪತಿ, ಪಪಂ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ್, ನಂದಪ್ಪ ಕತ್ತಿ, ನಿವೃತ್ತ ಶಿಕ್ಷಕ ನಾಗಪ್ಪ, ಬಾಲಣ್ಣ, ಉದಯರವಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಇದ್ದರು.